ಶ್ರೀನಗರ: ವೈಟ್ ಕಾಲರ್ ಭಯೋತ್ಪಾದನೆ ಮಾಡ್ಯೂಲ್ ಪ್ರಕರಣಕ್ಕೆ (White Collar Terror Module Case) ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆಯು ಶನಿವಾರ ಓರ್ವ ಶಂಕಿತನನ್ನ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನ ಜಮ್ಮು-ಕಾಶ್ಮೀರದ (Jammu Kashmir) ಬಟಮಾಲೂ ಪ್ರದೇಶದ ನಿವಾಸಿ ತುಫೈಲ್ ನಿಯಾಜ್ ಭಟ್ ಎಂದು ಗುರುತಿಸಲಾಗಿದೆ. ʻವೈಟ್ ಕಾಲರ್ʼ ಭಯೋತ್ಪಾದನೆ ಮಾಡ್ಯುಲ್ ಪ್ರಕರಣ ತನಿಖೆಯ ಭಾಗವಾಗಿ ನಿಯಾನ್‌ನನ್ನ ಬಂಧಿಸಲಾಗಿದೆ. ಇದನ್ನೂ ಓದಿ: ದೇಶದಲ್ಲಿ ʻವೈಟ್ ಕಾಲರ್ʼ ರಕ್ಕಸರು – ಹೇಗೆ ಹುಟ್ಟಿಕೊಳ್ತಾರೆ? ಭಾರತಕ್ಕೆ ಏಕೆ ಸವಾಲು?

ಕಳೆದ ಅ.27ರಂದು ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನ ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿದ್ದವು. ಈ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ವೈದ್ಯ ಆದಿಲ್ ಅಹ್ಮದ್ ರಾಥರ್ ಪೋಸ್ಟರ್ ಅಂಟಿಸುತ್ತಿರುವುದು ಬೆಳಕಿಗೆ ಬಂದಿತ್ತು. ಅದರಂತೆ ಶ್ರೀನಗರ ಪೊಲೀಸರು ಯುಎಪಿಎ ಕಾಯ್ದೆಯ (ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ) ಸೆಕ್ಷನ್ 13,16, 17, 18, 18-ಬಿ, 19, 20, 23, 39 &40, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 61 (2), 147, 148, 152, 351(2) ಹಾಗೂ ಸ್ಫೋಟಕ ವಸ್ತು ಕಾಯ್ದೆ ಸೆಕ್ಷನ್ 4/5 ಮತ್ತು ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ಸೆಕ್ಷನ್ 7/25/27 ಅಡಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿತ್ತು. ಇದರ ಬೆನಲ್ಲೇ ಇಬ್ಬರು ವೈದ್ಯರು ಸೇರಿದಂತೆ 7 ಉಗ್ರರನ್ನು ಬಂಧಿಸಿದ್ದು, ʻವೈಟ್ ಕಾಲರ್ ಭಯೋತ್ಪಾದಕ ಜಾಲʼವನ್ನ ಬಯಲಿಗೆಳೆಯಲಾಗಿತ್ತು. ಅನೇಕ ವೃತ್ತಿಪರರು ಹಾಗೂ ವಿದ್ಯಾರ್ಥಿಗಳೂ ಇದರಲ್ಲಿ ಸಕ್ರಿಯವಾಗಿದ್ದಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದರು.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಶ್ರೀನಗರ) ಡಾ. ಜಿ.ವಿ. ಸಂದೀಪ್ ಚಕ್ರವರ್ತಿ ವೈಯಕ್ತಿಕವಾಗಿ ತನಿಖೆಯ ನೇತೃತ್ವ ವಹಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ಮೊದಲು ಮೊದಲು ಮೂವರು ಶಂಕಿತರನ್ನ ಬಂಧಿಸಲಾಗಿತ್ತು. ಆರಿಫ್ ನಿಸಾರ್ ದಾರ್ ಅಲಿಯಾಸ್ ಸಾಹಿಲ್, ಯಾಸಿರ್-ಉಲ್-ಅಶ್ರಫ್ ಮತ್ತು ಮಕ್ಸೂದ್ ಅಹ್ಮದ್ ದಾರ್ ಅಲಿಯಾಸ್ ಶಾಹಿದ್ ಬಂಧಿತ ಶಂಕಿತು. ಮೂವರ ವಿಚಾರಣೆ ಬಳಿಕ ಇಮಾಮ್ ಆಗಿ ಮಾರ್ಪಟ್ಟ ಮೌಲ್ವಿ ಇರ್ಫಾನ್ ಅಹ್ಮದ್‌ನನ್ನ ಬಂಧಿಸಲಾಯಿತು. ಇವರೆಲ್ಲರ ವಿಚಾರಣೆ ನಡೆಯುತ್ತಿದ್ದಾಗಲೇ ಫರಿದಾಬಾದ್‌ನಲ್ಲಿ 2,900 ಕೆಜಿ ಸ್ಫೋಟಕ ವಸ್ತುಗಳನ್ನ ಪತ್ತೆಹಚ್ಚಿದ್ದರು. ಅದೇ ದಿನ ಸಂಜೆ ದೆಹಲಿಯ ಕೆಂಪುಕೋಟೆ ಸಮೀಪದ ಲಾಕ್ ಕಿಲಾ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1ರಲ್ಲಿ ಕಾರು ಸ್ಫೋಟಗೊಂಡಿತ್ತು.

ಸದ್ಯ ತನಿಖೆ ಮುಂದುವರಿಸಿರುವ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮತ್ತೊಬ್ಬ ಶಂಕಿತನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ದೆಹಲಿ ಕಾರ್ ಬಾಂಬ್ ಸ್ಫೋಟ ಕೇಸ್ – ಉಗ್ರ ಉಮರ್‌ನ ಮತ್ತೊಬ್ಬ ಸಹಚರ ಅರೆಸ್ಟ್
ವೈಟ್ ಕಾಲರ್ ಭಯೋತ್ಪಾದನೆ ಅಂದ್ರೆ ಏನು?
ಇದು ʻವೈಟ್ ಕಾಲರ್ ಅಪರಾಧʼ ಎನ್ನುವ ಪರಿಕಲ್ಪನೆಯಿಂದ ಪ್ರೇರಿತವಾದುದು. ವೃತ್ತಿಪರ ಶಿಕ್ಷಣ ಅಥವಾ ಉನ್ನತ ಶಿಕ್ಷಣ ಪಡೆದಿರುವವರು, ಭಯೋತ್ಪಾದನೆಯಲ್ಲಿ ತೊಡಗಿದ್ರೆ ಅದನ್ನು ವೈಟ್ ಕಾಲರ್ ಭಯೋತ್ಪಾದನೆ ಎನ್ನಲಾಗುತ್ತದೆ.
