– ನವೆಂಬರ್ 16ರಂದೇ ʻಪಬ್ಲಿಕ್ ಟಿವಿʼ ವರದಿ ಮಾಡಿತ್ತು
ಬಳ್ಳಾರಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇಡೀ ಅನಾಹುತಕ್ಕೆ ಗ್ಲೂಕೋಸ್ ಸಹಿತ ಇಂಟ್ರಾವೀನಸ್ (Intravenous) ದ್ರಾವಣ ಕಾರಣ ಅನ್ನೋ ವರದಿ ಬಹಿರಂಗವಾಗಿದೆ.
ಬಾಣಂತಿಯರ ಸರಣಿ ಸಾವಿನ (Serial Deaths of Barmaids) ಕುರಿತು ತನಿಖೆ ನಡೆಸಲು ನೇಮಕವಾಗಿದ್ದ ತಂಡ ವರದಿಯೊಂದನ್ನು ನೀಡಿದ್ದು, ಹೆರಿಗೆಯಾಗುವ ಗರ್ಭಿಣಿಯರಿಗೆ ಶಸ್ತ್ರ ಚಿಕಿತ್ಸೆ ವೇಳೆ ನೀಡಿದ ದ್ರಾವಣ (Glucose) ಕಳಪೆಯಾಗಿತ್ತು ಎಂಬ ವರದಿ ನೀಡಿದೆ ಎಂಬುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ದ್ರಾವಣದ ಬಗ್ಗೆ ದೂರು ಬಂದಿರುವುದರಿಂದ ಇಂಟ್ರಾವೀನಸ್ ದ್ರಾವಣ ಬಳಕೆ ಮಾಡದಂತೆ ಈಗಾಗಲೇ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಗ್ಲೂಕೋಸ್ ಬಳಸದಂತೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ರಾಜ್ಯದ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿನ ಸಾವಿನ ಬಗ್ಗೆ ತನಿಖೆ ನಡೆಸಲು ಸರ್ಕಾರ ತಂಡ ಕಳುಹಿಸಿತ್ತು. ಇದೀಗ ಶಸ್ತ್ರ ಚಿಕಿತ್ಸೆ ವೇಳೆ ಈ ಕಳಪೆ ಐವಿ ದ್ರಾವಣದಿಂದ ದೇಹದಲ್ಲಿ ದಿಢೀರ್ ಬದಲಾವಣೆ, ಅಡ್ಡ ಪರಿಣಾಮಗಳಿಂದ ಸಾವಾಗಿದೆ ಎಂದು ತಂಡ ವರದಿ ಸಲ್ಲಿಕೆ ಮಾಡಿದೆ.
ಇದೇ ವಿಚಾರವನ್ನ ನವೆಂಬರ್ 16 ರಂದು ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿತ್ತು. ವೈದ್ಯರು ನೀಡಿದ್ದ ಗ್ಲೂಕೋಸ್ ರಿಯಾಕ್ಷನ್‌ನಿಂದಲೇ ಬಾಣಂತಿಯರ ಸಾವಾಗಿದ್ದು ಎಂದು ವಿಸ್ತೃತ ವರದಿ ಬಿತ್ತರಿಸಲಾಗಿತ್ತು. ʻಪಬ್ಲಿಕ್ ಟಿವಿʼ ವರದಿ ಬಳಿಕ ಎಚ್ಚೆತ್ತುಕೊಂಡಿದ್ದ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ರಾಜ್ಯದ ಎಲ್ಲ ಡಿಹೆಚ್‌ಒಗಳಿಗೆ ಪತ್ರ ಬರೆದು ಬಾಂಗ್ಲಾ ಮೂಲದಿಂದ ಸರಬರಾಗಿದ್ದ ಗ್ಲೂಕೋಸ್ ಬಳಸದಂತೆ ಹೇಳಿತ್ತು.
ತಪ್ಪು ಸಾಬೀತಾದ್ರೆ ಕಂಪನಿ ಬ್ಲಾಕ್‌ಲಿಸ್ಟ್‌ಗೆ:
ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್, ಬಾಣಂತಿಯರ ಸಾವಿನ ಬಗ್ಗೆ ತನಿಖೆ ನಡೆಸಲಾಗ್ತಿದೆ. ಪ್ರಾಥಮಿಕ ವರದಿ ನಮಗೆ ಬಂದಿದೆ. ವರದಿಯಲ್ಲಿ ಮೇಲ್ನೋಟಕ್ಕೆ ಐವಿ ಪ್ಲುಯೆಡ್‌ನಿಂದ ಸಮಸ್ಯೆ ಆಗಿದೆ ಅನ್ನೋದು ಗೊತ್ತಾಗಿದೆ. ಹೀಗಾಗಿ ಸ್ಯಾಂಪಲ್‌ಗಳನ್ನ ಲ್ಯಾಬ್‌ಗೆ ಕಳುಹಿಸಲಾಗಿದೆ. ಇನ್ನೊಂದು ವಾರದಲ್ಲಿ ವರದಿ ಬರಲಿದೆ. ಮೆಡಿಕಲ್ ನೆಗ್ಲಿಜೆನ್ಸಿ ಇದ್ಯಾ ಅನ್ನೋದನ್ನ ಕೂಡ ನೋಡ್ತಿವಿ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು. ಈ ಹಿಂದೆ ಕೂಡ ಎರಡು ಬ್ಯಾಚ್ ಮೇಲೆ ಆರೋಪ ಇತ್ತು. ಎರಡು ಬ್ಯಾಚ್ ಬ್ಲಾಕ್‌ಲಿಸ್ಟ್‌ಗೆ ಸೇರಿಸಲಾಗಿತ್ತು. ಕೋರ್ಟ್‌ನಲ್ಲಿ ಸಾಬೀತು ಆದ ಬಳಿಕ ಮತ್ತೆ ಔಷಧ ಪೂರೈಕೆ ಮಾಡಲಾಗಿದೆ. ಇದೀಗ ಈ ಪ್ರಕರಣದ ಬಗ್ಗೆ ವರದಿ ಬಂದ ಬಳಿಕ ತಪ್ಪು ಸಾಬೀತಾದಲ್ಲಿ ಬ್ಲಾಕ್ ಲಿಸ್ಟ್‌ಗೆ ಸೇರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.