ಚಾಮರಾಜನಗರ: ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕ್ಯೂನಲ್ಲಿ ನಿಂತು ಸೇರಿಸುವಂತಾಗಬೇಕು. ಆ ಮಟ್ಟಿಗೆ ಸರ್ಕಾರಿ ಶಾಲೆಗಳನ್ನು ಇನ್ನು ಮೂರು ವರ್ಷಗಳಲ್ಲಿ ಸುಧಾರಣೆ ಮಾಡುವ ಕನಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆ ಪಚ್ಚೆದೊಡ್ಡಿಯಲ್ಲಿ ಶಾಲಾ ವಾಸ್ತವ್ಯ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್ ಅವರು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಇದರಿಂದ ಅವರ ಜೀವನವೂ ಸುಧಾರಣೆಯಾಗಲಿದೆ ಎಂದರು.
ಈ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗೆ ಪ್ರೌಢಶಿಕ್ಷಣ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆಗಳನ್ನು ಪೂರೈಸುವುದಾಗಿ ತಿಳಿಸಿದರು. ಹಾಗೆಯೇ ಈ ಪ್ರಶ್ನೆ ಪತ್ರಿಕೆಗಳು ಮುಖ್ಯ ಪರೀಕ್ಷೆಯ ಮಾದರಿಯಲ್ಲೇ ಇರಲಿದೆ. ಇದರಿಂದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ ಎದುರಿಸಲು ಸುಲಭವವಾಗಲಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಣ ಸಚಿವರಾದ ನಂತರ ರಾಜ್ಯದಲ್ಲಿ ಇದು ಅವರ ಮೂರನೇ ಶಾಲಾ ವಾಸ್ತವ್ಯವಾಗಿದೆ. ಮೊದಲನೇಯದಾಗಿ ತುಮಕೂರು ಜಿಲ್ಲೆಯ ಅಚ್ಚಮ್ಮನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು. ಆ ನಂತರ ಕಾಡುಗಳ್ಳ ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ವಾಸ್ತವ್ಯ ಮಾಡಿದ್ದರು. ಇದೀಗ ಪಚ್ಚೆದೊಡ್ಡಿಯ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದು, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.
6ನೇ ತರಗತಿಯಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ 5 ಕಿ.ಮೀ ದೂರದ ಅಜ್ಜಿಪುರಕ್ಕೆ ಕಾಡಿನ ನಡುವೆ ಕಲ್ಲು, ಮುಳ್ಳು ಹಾಗೂ ಕಡಿದಾದ ಹಾದಿಯಲ್ಲಿ ಮಕ್ಕಳು ನಡೆದು ಹೋಗಬೇಕು. ಕಾಡುಪ್ರಾಣಿಗಳ ಹಾವಳಿ ಬೇರೆ ಇದೆ. ನಡೆಯುವುದರಲ್ಲೇ ಸಾಕಷ್ಟು ಕಾಲ ವ್ಯಯವಾಗುವುದರಿಂದ ವಿದ್ಯಾಭ್ಯಾಸಕ್ಕೆ ಪೆಟ್ಟು ಬೀಳುತ್ತಿದೆ ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಸಚಿವರಿಗೆ ತಿಳಿಸಿದರು. ನಮಗೆ ರಸ್ತೆ ಬೇಕು, ವಾಹನ ವ್ಯವಸ್ಥೆಬೇಕು ಎಂದು ಮನವಿ ಮಾಡಿಕೊಂಡರು.
ಮಕ್ಕಳ ಸಮಸ್ಯೆಗೆ ಸ್ಪಂಧಿಸಿದ ಸಚಿವ ಸುರೇಶ್ ಕುಮಾರ್ ಅವರು, ಹತ್ತು ದಿನಗಳಲ್ಲಿ ಕಾಡಿನ ರಸ್ತೆಯ ಜಂಗಲ್ ಕಟಿಂಗ್ ಮಾಡಿ, ಅಜ್ಜಿಪುರಕ್ಕೆ ವ್ಯಾನ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶ ನೀಡಿದರು. ಇದೇ ವೇಳೆ ಅವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಗ್ರಾಮಕ್ಕೆ ಸಂಚಾರಿ ನ್ಯಾಯಬೆಲೆ ಅಂಗಡಿ ಸೌಲಭ್ಯ ಕಲ್ಪಿಸಿ, ತಿಂಗಳಲ್ಲಿ ಎರಡು ಬಾರಿ ಪಡಿತರ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೇ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ವೀಕ್ಷಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಕೂತು ಊಟ ಮಾಡಿದರು.