ಹಾಸನ: ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರಿಗೆ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಸುವ ಅಂಡರ್‌ವರ್ಲ್ಡ್ ಡಾನ್‌ಗಳಿಗೆ ತಲೆಬಾಗಿ ಕೈಮುಗಿದಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಲೇವಡಿ ಮಾಡಿದ್ದಾರೆ.
ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ.
ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ @narendramodi ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ.
ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು. pic.twitter.com/BOcpzumtHm
— Karnataka Congress (@INCKarnataka) March 12, 2023
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಹಿರಿಸಾವೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಡರ್‌ವರ್ಲ್ಡ್ ಡಾನ್‌ಗಳಿಗೆ ಕೈ ಮುಗಿಯುವ ದೃಶ್ಯ ನೋಡಿದಾಗ ಕರ್ನಾಟಕದಲ್ಲಿ ಬಿಜೆಪಿಯ ಪರಿಸ್ಥಿತಿ ಯಾವ ದಯನೀಯ ಸ್ಥಿತಿಗೆ ಬಂದಿದೆ ಅನ್ನೋದು ಗೊತ್ತಾಗಿದೆ. ಇದು ನಾಚಿಗೇಡಿನ ಸಂಗತಿ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ಸ್ವಾಗತ ವೇಳೆ ಫೈಟರ್ ರವಿ- ಪ್ರಧಾನಿ ಹುದ್ದೆಗೆ ಕಳಂಕವೆಂದು ಕುಟುಕಿದ ಕಾಂಗ್ರೆಸ್
ಬೆಲ್ಲದ ಸವಿ ನೋಡಿ ಅಭಿವೃದ್ಧಿ ಮಾಡಲಿ:
ಇದೇ ವೇಳೆ ಸಂಸದೆ ಸುಮಲತಾ (Sumalatha), ಮೋದಿಗೆ ಮಂಡ್ಯದ ಬೆಲ್ಲ ನೀಡಿದ ವಿಚಾರ ಕುರಿತು ಪ್ರತಿಕ್ರಿಯಿಸಿ, ತಪ್ಪೇನಿಲ್ಲ, ಮಂಡ್ಯ ಜಿಲ್ಲೆಯ ಜನತೆ ಯಾರೇ ಹೋದರೂ ಅತ್ಯಂತ ಪ್ರೀತಿಯಿಂದ, ಅಭಿಮಾನದಿಂದ ಸ್ವಾಗತ ಕೋರುವವರು. ಪಾಪ ಅವರು ಪ್ರಧಾನಮಂತ್ರಿಗಳಿಗೆ ಮಂಡ್ಯ ಬೆಲ್ಲದ ಸವಿ ನೋಡಲಿ. ಸವಿಯನ್ನು ನೋಡಿಯಾದ್ರು ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಗೆ ಒಳ್ಳೆಯ ಕಾರ್ಯಕ್ರಮ ಕೊಡಲಿ ಎನ್ನುವ ದೃಷ್ಟಿಯಲ್ಲಿ ಕೊಟ್ಟಿರಬಹುದು. ಮುಂದಿನ ದಿನಗಳಲ್ಲಾದರೂ ಬೆಲ್ಲದ ಸವಿ ನೋಡಿ ಏನಾದ್ರು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಕಾರ್ಯಕ್ರಮ ಕೊಡ್ತಾರಾ ನೋಡೋಣ ಎಂದು ಕುಟುಕಿದ್ದಾರೆ.
ಉರಿಗೌಡ, ನಂಜೇಗೌಡ ಫ್ಲೆಕ್ಸ್ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಆ ವ್ಯಕ್ತಿಗಳು ಟಿಪ್ಪುವನ್ನು (Tipu Sultan) ಕುತಂತ್ರದಿಂದ ಕೊಂದಿದ್ದಾರಾ ಅನ್ನೋದಕ್ಕೆ ಯಾವುದೇ ರೀತಿಯ ಇತಿಹಾಸವಿಲ್ಲ. ಆ ಇತಿಹಾಸ ಸೃಷ್ಟಿ ಮಾಡಿರುವುದು ಬಿಜೆಪಿಯವರು. ಆ ಇತಿಹಾಸವನ್ನು ಸೃಷ್ಟಿ ಮಾಡಿ, ನಮ್ಮ ಸಮಾಜದ ಇಬ್ಬರ ವ್ಯಕ್ತಿಗಳ ಹೆಸರನ್ನು ಇಟ್ಟಿರುವುದು. ಒಕ್ಕಲಿಗ ಸಮಾಜಕ್ಕೆ ಮಾಡುತ್ತಿರುವ ಅಪಮಾನ. ಆದ್ದರಿಂದ ಒಕ್ಕಲಿಗ ಸಮುದಾಯ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದರು.