ನವದೆಹಲಿ: ಸಿಗರೇಟ್ ತಯಾರಿಕಾ ಕ್ಷೇತ್ರದಲ್ಲಿ ತನ್ನದೇ ಆದಂತಃ ಹೆಸರು ಗಳಿಸಿರುವ ದೇಶದ ಅತಿ ದೊಡ್ಡ ಸಿಗರೆಟ್ ತಯಾರಕ ಕಂಪನಿ ಐಟಿಸಿ ಲಿಮಿಟೆಡ್, ಈಗ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‍ನಲ್ಲಿ(ಸಿಡಿಇಎಲ್) ಭಾಗವಾಗಿರುವ ಕೆಫೆ ಕಾಫಿ ಡೇ ಶೇರು ಖರೀದಿಗೆ ಮುಂದಾಗಿದೆ ಎನ್ನಲಾಗಿದೆ.
ಆದರೆ ಕೆಫೆ ಕಾಫಿ ಡೇ ಐಟಿಸಿಯ ನಿರ್ಧರನ್ನು ನಿರಾಕರಿಸಿದೆ ಎನ್ನಲಾಗುತ್ತಿದೆ. ಐಟಿಸಿ ಕಂಪನಿ ತನ್ನ ಉದ್ಯಮವನ್ನು ಮತ್ತಷ್ಟು ಬೆಳೆಸುವ ಪ್ರಯತ್ನ ಮಾಡುತ್ತಿದ್ದು, ಅದರ ಭಾಗವಾಗಿ ಈಗ ಕಾಫಿ ಡೇಯಲ್ಲಿನ ಶೇರುಗಳನ್ನು ಖರೀದಿಸಲು ಮುಂದಾಗಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಕೆಫೆ ಕಾಫಿ ಡೇ(ಸಿಸಿಡಿ) ಕಾಫಿ ಹೌಸ್‍ನ ಭಾಗವಾಗಿದ್ದು, ಇದನ್ನು ಸಿಡಿಇಎಲ್ ನೋಡಿಕೊಳ್ಳುತ್ತದೆ. ಭಾರತದಲ್ಲಿ ಕಾಫಿ ಡೇ ಸುಮಾರು 1,700 ಮಳಿಗೆಗಳನ್ನು ಹೊಂದಿದೆ. ಆದರೆ ಸಿಸಿಡಿ ಸ್ಥಾಪಕ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಕಂಪನಿ ಸಂಕಷ್ಟದಲ್ಲಿ ಸಿಲುಕಿದೆ.
ಸಿದ್ಧಾರ್ಥ್ ಅವರ ಸಾವಿನ ಬಳಿಕ ಕಾಫಿ ಡೇ ಎಂಟರ್‌ಪ್ರೈಸಸ್ ಸಿಸಿಡಿಯ ಶೇರ್ ಅನ್ನು ಮಾರುವ ಮೂಲಕ ಅದರ ಸಾಲವನ್ನು ತೀರಿಸಲು ಯೋಚಿಸುತ್ತಿದೆ. ಜೂನ್ ವರದಿಯ ಪ್ರಕಾರ, ಕೊಕೊ ಕೋಲಾ ಕಂಪನಿಯು ಸಿಡಿಇಎಲ್ ಜೊತೆ ಮಾತನಾಡಿ ಸಿಸಿಡಿಯಲ್ಲಿ ಗಣನೀಯ ಪಾಲನ್ನು ನೀಡುವಂತೆ ಹೇಳಿತ್ತು.
ಇತ್ತೀಚಿಗಷ್ಟೇ, ಸಿಡಿಇಎಲ್ ಮಂಡಳಿಯು ತನ್ನ ಸಾಲಗಳನ್ನು ತಗ್ಗಿಸಲು ಸಹಾಯ ಮಾಡಲು ಬೆಂಗಳೂರಿನ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಅನ್ನು ಬ್ಲ್ಯಾಕ್ಸ್ಟೋನ್‍ಗೆ ಮಾರಾಟ ಮಾಡಲು ಅನುಮೋದಿಸಿತು. ಈ ಒಪ್ಪಂದದಿಂದ ಸಿಡಿಇಎಲ್ 3,000 ಕೋಟಿ ರೂ.ಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಆದಾಗ್ಯೂ, ಈ ಒಪ್ಪಂದವು ಬ್ಲಾಕ್‍ಸ್ಟೋನ್‍ನ ಸರಿಯಾದ ಪರಿಶ್ರಮ ಮತ್ತು ಇತರ ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿದೆ.
ಭಾರತವು ತಂಬಾಕಿನ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ನಿಷೇಧಿಸಲಾಗಿದೆ. ಹೀಗಾಗಿ ಈಗ ಐಟಿಸಿ ಕಂಪನಿ ಸಿಗರೇಟ್ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ ತನ್ನ ವ್ಯವಹಾರವನ್ನು ಇತರೆ ಕ್ಷೇತ್ರದಲ್ಲಿ ವಿಸ್ತರಿಸಲು ಮುಂದಾಗಿದೆ ಎನ್ನಲಾಗಿದೆ. ಮೂಲಗಳು ಹೇಳುವಂತೆ, ಸಿಡಿಇಎಲ್ ಶೇರ್ ಖರೀದಿಗೆ ಐಟಿಸಿ ಮುಂದಾಗಿದ್ದು, ಈ ವಿಚಾರದ ಚರ್ಚೆಯು ಸದ್ಯ ಪ್ರಾಥಮಿಕ ಹಂತದಲ್ಲಿದೆ.
ಈ ವಿಚಾರದ ಬಗ್ಗೆ ಐಟಿಸಿ ಪ್ರತಿಕ್ರಿಯಿಸಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದೆ.