– ತಿಂಗಳ ಸಂಬಳದ ಹಣವನ್ನು ಒಂದೇ ದಿನದಲ್ಲಿ ಗಳಿಸುತ್ತಿದ್ದ ಶಿಕ್ಷಕಿ
ರೋಮ್: ‘ಒನ್ಲಿಫ್ಯಾನ್ಸ್’ ಎಂಬ ಹೆಸರಿನಲ್ಲಿ ತನ್ನ ನಗ್ನ ಚಿತ್ರ ಹಾಗೂ ವೀಡಿಯೋಗಳನ್ನು ಅಶ್ಲೀಲ ತಾಣಗಳಿಗೆ ನೀಡುತ್ತಿದ್ದ ನರ್ಸರಿ ಶಾಲಾ ಶಿಕ್ಷಕಿಯೊಬ್ಬರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ.
ಇಟಲಿಯ ಕ್ಯಾಥೋಲಿಕ್ ಮಕ್ಕಳ ಶಾಲೆಯ 29 ವಯಸ್ಸಿನ ಶಿಕ್ಷಕಿ ಎಲೆನಾ ಮರಗಾ, ಓನ್ಲಿಫ್ಯಾನ್ಸ್ ಮಾಡೆಲ್ ಆಗಿ ಮೂನ್‌ಲೈಟ್ ಮಾಡುತ್ತಿದ್ದಾಗ ಸಿಕ್ಕಿಬಿದ್ದು, ಸಸ್ಪೆಂಡ್ ಆಗಿದ್ದಾರೆ.
ವಯಸ್ಕರ ಫೋಟೊ ಮತ್ತು ವೀಡಿಯೋಗಳನ್ನು ಪೋಸ್ಟ್ ಮಾಡಿ, ಚಂದಾದಾರರೊಡನೆ ಹಂಚಿಕೊಳ್ಳುವ ಆಯ್ಕೆಯನ್ನು ಒನ್ಲಿಫ್ಯಾನ್ಸ್ ಬಳಕೆದಾರರಿಗೆ ನೀಡುತ್ತದೆ. ಈ ತಾಣದಲ್ಲಿ ತನ್ನ ಚಿತ್ರ, ವೀಡಿಯೋಗಳನ್ನು ಶಿಕ್ಷಕಿ ಎಲೆನಾ ಹಂಚಿಕೊಳ್ಳುತ್ತಿದ್ದರು. ಇದನ್ನು ಪೋಷಕರು ಗಮನಿಸಿ ಆಡಳಿತ ಮಂಡಳಿಗೆ ತಿಳಿಸಿದ್ದರು. ದೂರು ಸ್ವೀಕರಿಸಿದ ನಂತರ ಶಾಲಾ ಆಡಳಿತವು ಕ್ರಮ ಕೈಗೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಲೆನಾ ಮರಗಾ, ನನ್ನ ಬಿಡುವಿನ ವೇಳೆಯಲ್ಲಿ ಈ ಕೆಲಸ ಮಾಡುತ್ತಿದ್ದೇನೆ. ಇದರಿಂದ ಬೇರೆ ಯಾರಿಗೂ ತೊಂದರೆಯಾಗಿಲ್ಲ. ನನಗೆ ತಿಂಗಳಿಗೆ 1,200 ಯುರೋ (1.1 ಲಕ್ಷ ರೂ.) ಸಂಬಳ ಬರುತ್ತದೆ. ಇದು ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಆದರೆ, ಒನ್ಲಿಫ್ಯಾನ್ಸ್ ಮೂಲಕ ತಿಂಗಳ ಸಂಬಳದಷ್ಟೇ ಹಣವನ್ನು ಒಂದೇ ದಿನದಲ್ಲಿ ಗಳಿಸುತ್ತಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮಕ್ಕಳಿಗೆ ಪಾಠ ಕಲಿಸುವುದು ತುಂಬಾ ಇಷ್ಟ, ಅದು ನನ್ನ ವೃತ್ತಿ. ಆದರೆ ನಾನು ಇಂಟರ್ನೆಟ್‌ನಲ್ಲಿ ಹೆಚ್ಚು ಸಂಪಾದಿಸುತ್ತೇನೆ. ನಾನು ಒಂದು ತಿಂಗಳ ಹಿಂದೆ ಒನ್ಲಿಫ್ಯಾನ್ಸ್ ಅನ್ನು ತೆರೆದೆ. ಕುತೂಹಲದಿಂದ ಮೋಜಿಗಾಗಿ, ಅದರಲ್ಲಿ ನಿಜವಾಗಿಯೂ ಹಣ ಗಳಿಸಬಹುದೇ ಎಂದು ನೋಡಲು ತೆರೆದೆ. ಶಿಕ್ಷಕ ವೃತ್ತಿಯಿಂದ ನನಗೆ ತಿಂಗಳಿಗೆ ಸಿಗುವ ಸಂಬಳ, ಇದರಲ್ಲಿ ಒಂದೇ ದಿನದಲ್ಲಿ ಸಿಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ವಿವಾದದ ಮಧ್ಯೆ, ಇಟಲಿಯ ಶಿಕ್ಷಣ ಸಚಿವಾಲಯವು ವಯಸ್ಕರ ವೆಬ್‌ಸೈಟ್‌ಗಳಲ್ಲಿ ಶಿಕ್ಷಕರು ಕಾಣಿಸಿಕೊಳ್ಳುವುದನ್ನು ನಿಷೇಧಿಸುವ ಹೊಸ ನೀತಿ ಸಂಹಿತೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ಸಂಹಿತೆಯು ಶಿಕ್ಷಕರು ತಮ್ಮ ಶಾಲೆಗಳ ಪ್ರತಿಷ್ಠೆ ಮತ್ತು ಖ್ಯಾತಿಗೆ ಧಕ್ಕೆ ತರುವ ಹೇಳಿಕೆಗಳು, ಚಿತ್ರಗಳು ಅಥವಾ ನಡವಳಿಕೆಯನ್ನು ತಪ್ಪಿಸಲು ನಿರ್ದೇಶಿಸುವ ಸಾಧ್ಯತೆಯಿದೆ.