ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆಪ್ತನ ಮನೆ ಮೇಲೆ ಐಟಿ ರೈಡ್ ಆಗಿದೆ. ಕಾಂಗ್ರೆಸ್ ಕಟ್ಟಾಳು ಆಗಿರುವ ಉದ್ಯಾವರದ ಸದಾಶಿವ್ ಅಮೀನ್ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಸದಾಶಿವ ಅವರನ್ನು ಆದಾಯ ತೆರಿಗೆ ಅಧಿಕಾರಿಗಳು ಕರೆದೊಯ್ದಿದ್ದಾರೆ.
ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ನಿವಾಸಿಯಾಗಿರುವ ಕಟ್ಟೆ ಗುಡ್ಡೆ ಸದಾಶಿವ್, ಫೈನಾನ್ಸ್ ಮ್ಯಾನೇಜರ್ ಆಗಿದ್ದಾರೆ. ಪ್ರಮೋದ್ ಮಧ್ವರಾಜ್ ಕಟ್ಟಾ ಬೆಂಬಲಿಗರಾಗಿರುವ ಅವರು ಮಧ್ವರಾಜ್ ಜೆಡಿಎಸ್ ನಿಂದ ಟಿಕೆಟ್ ಪಡೆದ ನಂತರ ಕೆಲ ದಿನ ಟೀಕಿಸಿದ್ದರೂ, ಸದ್ಯ ಚುನಾವಣಾ ಕಣಕ್ಕೆ ಬಿರುಸಿನಿಂದ ಧುಮುಕಿದ್ದರು ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿದೆ.
ಉದ್ಯಾವರ ಭಾಗದಲ್ಲಿ ಪ್ರಭಾವಿಯಾಗಿರುವ ಸದಾಶಿವ್ ಮೇಲೆ ಉಡುಪಿಯ ಸ್ಥಳೀಯ ಐಟಿ ಅಧಿಕಾರಿಗಳಿಂದ ದಾಳಿ ನಡೆದಿದೆ. ಮನೆಯಲ್ಲೇ ಕೆಲವು ಗಂಟೆಗಳ ಕಾಲ ದಾಖಲೆ ಪರಿಶೀಲನೆ ಮಾಡಿರುವ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗೆ ಸದಾಶಿವರನ್ನು ಕಚೇರಿಗೆ ಕರೆದೊಯ್ದಿದ್ದಾರೆ. ಈ ವೇಳೆ ಐಟಿ ಅಧಿಕಾರಿಗಳ ಜೊತೆ ಉಡುಪಿ ತಹಶೀಲ್ದಾರ್ ಕೂಡ ಸ್ಥಳದಲ್ಲಿದ್ದರು. ಇಬ್ಬರ ಸಮ್ಮುಖದಲ್ಲಿ ವಿಚಾರಣೆ ನಡೆದಿದೆ. ಐಟಿ ಅಧಿಕಾರಿಗಳು ಚುನಾವಣೆಯ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾರೊ ಅಥವಾ ಸಹಜ ಪ್ರಕ್ರಿಯೆಯ ಐಟಿ ದಾಳಿಯೋ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
ಸಂಶಯ ಬಾರದಂತೆ ಕೆಲ ಅಧಿಕಾರಿಗಳು ಚುನಾವಣಾ ಕರ್ತವ್ಯ ವಾಹನದಲ್ಲಿ ಕೂಡ ಸ್ಥಳಕ್ಕೆ ಬಂದಿದ್ದರು. ಆದ್ರೆ ಈ ಬಗ್ಗೆ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಕೇಳಿದ್ರೆ, ನನಗೇನು ಗೊತ್ತಿಲ್ಲ. ಐಟಿ ದಾಳಿಯಾಗಿದ್ಯಾ ಎಂದು ಮರು ಪ್ರಶ್ನೆ ಮಾಡುವ ಮೂಲಕ ನುಣುಚಿಕೊಂಡಿದ್ದಾರೆ.