ಮಂಡ್ಯ: ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕ ಎಂ.ಎಸ್ ಆತ್ಮಾನಂದ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಎಂ.ಎಸ್ ಆತ್ಮಾನಂದ ಅವರು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕರಾಗಿದ್ದು, ಸದ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಮಂಡ್ಯದ ಸುಭಾಷ್ ನಗರ 1ನೇ ತಿರುವಿನಲ್ಲಿರುವ ಆತ್ಮಾನಂದ ಮನೆ ನಾಲ್ಕೈದು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಮನೆಯಲ್ಲಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಬಿಸಿದೆ.
ಕೆಲ ದಿನಗಳ ಹಿಂದೆಯಷ್ಟೇ ರಾಜ್ಯದಲ್ಲಿ ನಡೆದ ಐಟಿ ದಾಳಿಯ ಬಗ್ಗೆ ಸಿಎಂ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ಪಕ್ಷ ನಾಯಕರು, ಕಾರ್ಯಕರ್ತರು ಬೆಂಗಳೂರಿನ ಐಟಿ ಇಲಾಖೆ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಐಟಿ ಬಿಜೆಪಿಯ ಕೈಗೊಂಬೆಯಾಗಿದೆ. ಕೇವಲ ಕಾಂಗ್ರೆಸ್, ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರಗಳ ನಾಯಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಪ್ರತಿಭಟನೆ ನಡೆಸಿ ಐಟಿ ಇಲಾಖೆಯ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಐಟಿ ದಾಳಿಯ ಬಗ್ಗೆ ಕಿಡಿಕಾರಿದ್ದ ಸಿಎಂ, ನಮ್ಮ ನಾಯಕರನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಲಾಗುತ್ತಿದೆ. ಅಪರೇಷನ್ ಕಮಲ ವೇಳೆ ಏಕೆ ಕ್ರಮ ಕೈಗೊಂಡಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐಟಿ ಅಧಿಕಾರಿಗಳ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದಾರೆ. ಐಟಿ ಅಧಿಕಾರಿ ಬಾಲಕೃಷ್ಣ ಅವರಿಗೆ ಸಂವಿಧಾನಾತ್ಮಕ ಹುದ್ದೆಯ ಆಮಿಷವನ್ನು ಒಡ್ಡಿದ್ದು, ಅವರ ಸಹಾಯದಿಂದ ಈ ರೀತಿ ದಾಳಿ ಮಾಡಿಸುತ್ತಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಅವರು ಕೇಂದ್ರ ಸರ್ಕಾರ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ದಾಳಿ ಮೂಲಕ ವಿಪಕ್ಷಗಳಿಗೆ ಚುನಾವಣೆ ಸಮಯದಲ್ಲಿ ತೊಂದರೆ ಕೊಡುತ್ತಿದ್ದಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.