ಮಂಡ್ಯ: ನನ್ನ ಮಕ್ಕಳು ಜನಸೇವೆಯನ್ನು ಮಾಡುತ್ತಿದ್ದಾರೆ. ಅವರೂ ಯಾರಿಗೂ ಮೋಸ ಮಾಡಿಲ್ಲ. ನಮ್ಮ ಮನೆ ಮತ್ತು ಮಕ್ಕಳು ಮನೆ ಮೇಲೆ ದಾಳಿ ಮಾಡುವಂತಹದ್ದು ಏನೂ ಇರಲಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಹೇಳಿದ್ದಾರೆ.
ಐಟಿ ಅಧಿಕಾರಿಗಳು ಮನೆಗ ಬಂದರು, ಮನೆಯ ಗೇಟ್‍ನ ಬೀಗ ಹಾಕಿದರು. ಇದ್ಯಾವುದಕ್ಕೂ ನನಗೆ ಬೇಸರವಿಲ್ಲ. ಅವರ ಮನೆಯ ಒಳಗಡೆ ಬಂದು ತಮ್ಮ ಕೆಲಸವನ್ನು ಮಾಡುತ್ತಿದ್ದರು. ನನ್ನಿಂದ ಅವರ ಕೆಲಸಕ್ಕೆ ಯಾವುದೇ ತೊಂದರೆಯಾಗಿಲ್ಲ. ನನ್ನ ಮಕ್ಕಳೂ ಎಂದೂ ತಪ್ಪು ಮಾಡಲ್ಲ, ಹಾಗಾಗಿ ನಾನು ಭಯಗೊಂಡಿಲ್ಲ ಎಂದು ಗೌರಮ್ಮ ಹೇಳಿದರು.
ಸಿಎಂ ವಿರುದ್ಧ ಕಿಡಿ: ಸಿಎಂ ಸಿದ್ದರಾಮಯ್ಯ ನನ್ನ ಮಗನಿಂದ ಮುಂದೆ ಬಂದಿದ್ದಾರೆ. ಸಿದ್ದರಾಮಯ್ಯ ನಂಬಿಸಿ ಕತ್ತು ಕುಯ್ಯುತ್ತಿದ್ದಾರೆ. ನನ್ನ ಮಕ್ಕಳನ್ನು ಕಂಡ್ರೆ ಅವರಿಗೆ ಆಗಿ ಬರೋದಿಲ್ಲ. ಅಕ್ಕಿ ಕೊಟ್ಟೆ, ಅದು ಕೊಟ್ಟೆ ಎಲ್ಲಾ ಕೊಟ್ರೂ ಅದೇನು ಅವರ ಮನೆಯಿಂದ ಕೊಟ್ಟಿಲ್ಲ. ರೈತರು ಬೆಳೆದಿದ್ದ ಅಕ್ಕಿಯನ್ನು ಕೊಟ್ಟಿದ್ದಾರೆ. ನನ್ನ ಮಕ್ಕಳ ಮನೆ ಮೇಲೆ ದಾಳಿ ನಡೆದರೂ ಸಿದ್ದರಾಮಯ್ಯ ಯಾಕೆ ಸುಮ್ಮನಿದ್ದಾರೆ? ಸಿದ್ದರಾಮಯ್ಯ ನನ್ನ ಮಕ್ಕಳ ಮೇಲೆ ಕತ್ತಿ ಮಸಿಯುತ್ತಿದ್ದಾರೆ. ಅವರಿಗೆ ಅಧಿಕಾರಿಗಳನ್ನು ಪ್ರಶ್ನಿಸುವ ಹಕ್ಕಿದ್ದರೂ ಸುಮ್ಮನಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.
ರಾಜಕೀಯ ಎನ್ನುವುದೇ ತುಂಬಾ ಕೆಟ್ಟದ್ದು, ಇದರಲ್ಲಿ ಜನ ನಾವುಗಳು ಮುಂದೆ ಬರೋದನ್ನು ಸಹಿಸಲ್ಲ. ಹೀಗಾಗಿ ದ್ವೇಷವನ್ನು ಸಾಧಿಸುತ್ತಾರೆ. ನಮ್ಮ ಮನೆಯ ಮೇಲೆ ಐಟಿ ದಾಳಿ ನಡೆಯೋದಕ್ಕೆ ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇರ ಹೊಣೆ ಆಗುತ್ತಾರೆ. ಇದರ ಪ್ರತಿಫಲವನ್ನು ಮುಂದೊಂದು ದಿನ ಅನುಭವಿಸುತ್ತಾರೆ. ಈ ರೀತಿಯ ದ್ವೇಷ ಮಾಡುವರು ಹುಚ್ಚರು, ಮುಟ್ಟಾಳರು ಎಂದು ಕಿಡಿಕಾರಿದರು.
ರಾಜ್ಯದ್ಯಾಂತ ನನ್ನ ಮಕ್ಕಳ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆಲ್ಲ ನನ್ನ ಧನ್ಯವಾದಗಳು. ರಾಜ್ಯದ ಬಿಜೆಪಿ, ಜನತಾದಳ ಎಲ್ಲಾ ಪಕ್ಷದವರು ನಮಗೆ ಸಹಾಯ ಮಾಡಿದ್ದಾರೆ. ಮುಂದೊಂದು ದಿನ ನನ್ನ ಮಕ್ಕಳು ನಿಮ್ಮ ಋಣ ತೀರುಸ್ತಾರೆ. ನನ್ನ ಮಕ್ಕಳು ತುಂಬಾ ಪವಿತ್ರವಾದವರು. ಅವರಿಗೆ ಮೋಸ ಮಾಡಬೇಕು ಎಂಬ ಮನಸ್ಸಿಲ್ಲ. ತಪ್ಪು ಮಾಡುವ ಮಕ್ಕಳನ್ನು ನಾನು ಹೆತ್ತಿಲ್ಲ ಎಂದು ಹೇಳಿದರು.