ಬಳ್ಳಾರಿ: ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಮೇಲಿನ ಐಟಿ ದಾಳಿ ಯಾವುದೇ ರಾಜಕೀಯ ಪ್ರೇರಿತ ಅಲ್ಲ ಎಂದು ಹೇಳುವ ಮೂಲಕ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಕಾಂಗ್ರೆಸ್ ನಾಯಕರಿಗೆ ಅಚ್ಚರಿ ಮೂಡಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ನಾನು ಒಬ್ಬ ಉದ್ಯಮಿ ನನ್ನ ಮೇಲೂ ಈ ಹಿಂದೆ ಐಟಿ ದಾಳಿ ಆಗಿವೆ. ಇದನ್ನು ನಾನೂ ಎದುರಿಸಿದ್ದೇನೆ, ತೆರಿಗೆ ಸರಿಯಾಗಿ ಕಟ್ಟಿದ್ದರಿಂದ ನನಗೆ ಯಾವುದೇ ತೊಂದರೆಯಾಗಿಲ್ಲ. ದಾಳಿ ಆಗಿದೆ ಎಂಬ ಮಾತ್ರಕ್ಕೆ ಇದು ರಾಜಕೀಯ ಪ್ರೇರಿತ ಎನ್ನುವುದು ತಪ್ಪು. ಐಟಿ ಇಲಾಖೆ ಹಲವಾರು ದಿನಗಳ ಕಾಲ ಮಾಹಿತಿ ಪಡೆದು ದಾಳಿ ಮಾಡುತ್ತದೆ. ದಾಳಿ ಮಾಡುವುದು ಅವರ ಕೆಲಸ ಎಂದು ತಿಳಿಸಿದರು.
ಐಟಿ ಇಲಾಖೆ ಯಾರ ಹಿಡಿತದಲ್ಲಿ, ಹಂತದಲ್ಲಿ ಇರುವುದಿಲ್ಲ, ಇದಕ್ಕಾಗಿ ಹಲವಾರು ದಿನದಿಂದ ಸಿದ್ಧತೆ ನಡೆಸಿರುತ್ತಾರೆ. ಇದನ್ನು ರಾಜಕೀಯ ಪ್ರೇರಿತ ಎಂದು ಹೇಳಲು ಸಾಧ್ಯವಿಲ್ಲ. ನಾನಂತೂ ಆ ರೀತಿ ಹೇಳಲು ಇಷ್ಟ ಪಡಲ್ಲ. ಮಾಮೂಲಿಯಾಗಿ ಐಟಿ ದಾಳಿ ನಡೆಯುತ್ತಲೇ ಇರುತ್ತದೆ. ಇದರಿಂದಾಗಿ ಹಿರಿಯ ರಾಜಕಾರಣಿಯಾಗಿರುವುದರಿಂದ ಪರಮೇಶ್ವರ್ ಅವರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಸರಿಯಾದ ದಾಖಲೆಗಳನ್ನು ಅವರು ಇಲಾಖೆಗೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದರೆ ಬಹುತೇಕ ಕಾಂಗ್ರೆಸ್‍ನ ಹಿರಿಯ ನಾಯಕರು ಐಟಿ ದಾಳಿ ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ನಡೆಯುತ್ತಿದೆ. ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿದ್ದಾರೆ.