ಬಿಎಂಟಿಸಿ ಟು ಪಿಎ ಜರ್ನಿ – ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವ ಕೋಟಿ ಕುಬೇರನಾದ ಕಥೆ ಓದಿ

Public TV
3 Min Read
it raid umesh bsy

ಬೆಂಗಳೂರು: ಬಿಎಂಟಿಸಿ ನಿರ್ವಾಹಕನಾಗಿ ತಿಂಗಳಿಗೆ ಸಾವಿರದಲ್ಲಿ ಸಂಬಳ ಪಡೆಯುತ್ತಿದ್ದ ಉಮೇಶ್ 10 ವರ್ಷದಲ್ಲಿ ಕೋಟಿ ಕುಳವಾಗಿ ಬೆಳೆದ ಕಥೆಯೇ ರೋಚಕ.

ಐಟಿ ರೇಡ್ ಆಗಿರುವ ಬಿಎಂಟಿಸಿ ಸಿಬ್ಬಂದಿ ಉಮೇಶ್ ಡಿಪೋ ನಂಬರ್ 11ರಲ್ಲಿ ಕಂಡಕ್ಟರ್ ಕಂ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಉಮೇಶ್ ಬಿಎಂಟಿಸಿಯಿಂದ ಪಡೆಯುತ್ತಿದ್ದ ತಿಂಗಳ ಸಂಬಳ 32 ಸಾವಿರ ರೂಪಾಯಿ. ಕೈಗೆ ಸಿಗುತ್ತಿದ್ದಿದ್ದು 28 ಸಾವಿರ ರೂಪಾಯಿ.

2007-08ರಲ್ಲಿ ಬಿಎಂಟಿಸಿ ಉದ್ಯೋಗಿಯಾದ ಉಮೇಶ್, ಟ್ರೈನಿಯಾಗಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಒಂದೇ ವರ್ಷಕ್ಕೆ ಉದ್ಯೋಗ ಬೇಡ ಎನ್ನಿಸಿತ್ತು. ಇದೇ ವೇಳೆ ಬಿ.ಎಸ್.ಯಡಿಯೂರಪ್ಪ ಮೊದಲಬಾರಿಗೆ ಸಿಎಂ ಆಗಿದ್ದರು. ಈ ವೇಳೆ ಉಮೇಶ್ ಎರವಲು ಸೇವೆ ಅರ್ಜಿ ಸಲ್ಲಿಸಿದ್ದ. 2008ರಲ್ಲಿ ಎರವಲು ಸೇವೆಯಡಿ ವಿಧಾನಸೌಧದತ್ತ ಪ್ರಯಾಣ ಬೆಳೆಸಿದ್ದ. ಎರವಲು ಸೇವೆಗೆ ನಿಯೋಜನೆಯಾಗುವ ಮುನ್ನ ಉಮೇಶ್ ತಿಂಗಳಿಗೆ 3,500ರೂ. ಸಂಬಳ ಪಡೆಯುತ್ತಿದ್ದ. ಒಂದೇ ವರ್ಷಕ್ಕೆ ಟ್ರೇನಿಯಿಂದ ಪ್ರೊಬೆಷನರಿಯಾಗಿ ಬಡ್ತಿ ಪಡೆದು ತಿಂಗಳಿಗೆ 18 ಸಾವಿರ ರೂ.ವೇತನ ಪಡೆಯುತ್ತಿದ್ದ. ಇದನ್ನೂ ಓದಿ: ಬಿಎಸ್‍ವೈ ಆಪ್ತನ ಮನೆ ಮೇಲೆ ಐಟಿ ರೇಡ್

ಇದೀಗ ಉಮೇಶ್ ವೇತನ ತಿಂಗಳೀಗೆ 30ರಿಂದ 32 ಸಾವಿರ ರೂ. ಇದೆ. ಎರವಲು ಸೇವೆಗೆ ನಿಯೋಜನೆಯಾದರೆ ಎರಡು ವರ್ಷದ ಬಳಿಕ ಮಾತೃ ಇಲಾಖೆಯಲ್ಲಿ ಕೆಲಸ ಮಾಡಿ, ಡೆಪ್ಟೇಷನ್ ಪಡೆಯಬಹುದು. ಆದರೆ ಉಮೇಶ್ ಮಾತ್ರ 2008ರಿಂದ ಎರವಲು ಸೇವೆಯಲ್ಲಿಯೇ ಮುಂದುವರಿಯುತ್ತಿರುವುದು ವಿಶೇಷ.

ಇಷ್ಟು ಕಡಿಮೆ ವೇತನವಿದ್ದರೂ ಉಮೇಶ್ ಕೋಟ್ಯಧಿಪತಿ ಆಗಿದ್ದಾನೆ. ಸದ್ಯ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ 3 ಅಂತಸ್ತಿನ ಮನೆಯಲ್ಲಿ ಬಾಡಿಗೆ ಇದ್ದು, ಸಹಕಾರ ನಗರದಲ್ಲಿ ಕೋಟ್ಯಂತರ ಮೌಲ್ಯದ ಮನೆ ನಿರ್ಮಾಣ ಮಾಡುತ್ತಿದ್ದಾನೆ. ಬಗಲಗುಂಟೆಯಲ್ಲಿ ಸೈಟ್‍ಗಳಿವೆ. ನೆಲಮಂಗಲದಲ್ಲಿ ಜಮೀನು, ಬಿಡಿಎನಲ್ಲಿ ಅನೇಕ ಸೈಟ್‍ಗಳು ಮಂಜೂರಾಗಿವೆ. ಅಲ್ಲದೆ ತನ್ನ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದಾನೆ. ಇತ್ತೀಚೆಗೆ ಎಲೆಕ್ಷನ್‍ನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಹೋದರನನ್ನೂ ಗೆಲ್ಲಿಸಿಕೊಂಡಿದ್ದಾನೆ.

ಬಿಎಸ್‍ವೈ ಸಂಪರ್ಕ ಹೇಗೆ?
ಮೂಲತಃ ಶಿವಮೊಗ್ಗ ಜಿಲ್ಲೆಯ ಆಯನೂರಿನವನಾದ ಉಮೇಶ್, ಬಿ.ಎಸ್.ಯಡಿಯೂರಪ್ಪನವರ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. 2008ರಲ್ಲಿ ಬಿಎಸ್‍ವೈ ಸಿಎಂ ಆಗಿದ್ದಾಗ ಆಪ್ತ ಶಾಖೆಯಲ್ಲಿ ಕೆಲಸ ಕೆಲಸ ಮಾಡಿದ್ದ. ಅಧಿಕಾರ ಕಳೆದುಕೊಂಡರೂ ಬಿಎಸ್‍ವೈ ನಂಟು ಬಿಟ್ಟಿರಲಿಲ್ಲ. ಬಿಎಸ್‍ವೈ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. 2019ರಲ್ಲಿ ಮತ್ತೆ ಬಿಎಸ್‍ವೈ ಸಿಎಂ ಆದಾಗ ಸಹ ಆಪ್ತ ಸಹಾಯಕನಾಗಿ ಮುಂದುವರಿದಿದ್ದ. ಯಡಿಯೂರಪ್ಪನವರ ಎಲ್ಲ ಖಾಸಗಿ ಕೆಲಸಗಳನ್ನು ನಿರ್ವಹಿಸುತ್ತಿದ್ದ. ಇದೀಗ ಬಿಎಸ್‍ವೈ ರಾಜೀನಾಮೆ ಬಳಿಕ ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿಯವರ ಕಚೇರಿಯಲ್ಲಿ ಸಹಾಯಕನಾಗಿ ಸೇರ್ಪಡೆಯಾಗಿದ್ದ. ಸಿಎಂ ಆಪ್ತ ಸಹಾಯಕನಾದರೂ ಬಿಎಸ್‍ವೈ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಉಮೇಶ್ ಮೊದಲು ಆಯನೂರು ಮಂಜುನಾಥ್ ಅವರಿಗೆ ಪಿಎ ಆಗಿದ್ದ. ಆಯನೂರು ಎಂಪಿ ಆದ ಮೇಲೆ ಬಿಎಸ್‍ವೈ ಜೊತೆ ಇರಲು ಬಿಟ್ಟರು. ಆಗಿನಿಂದ ಯಡಿಯೂರಪ್ಪನವರ ಕುಟುಂಬದ ಜತೆ ಆಪ್ತತೆ ಬೆಳೆಯಿತು. ಯಡಿಯೂರಪ್ಪನವರು ವಿಧಾನಸಭೆ ವಿಪಕ್ಷ ನಾಯಕರಾದಾಗಿಂದ ಉಮೇಶ್ ಜೊತೆಗಿದ್ದಾನೆ. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ

ವರ್ಗಾವಣೆ, ಟೆಂಡರ್ ಡೀಲ್‍ಗಳಲ್ಲಿ ಶಾಮೀಲು
ಇದೀಗ ಶಿವಮೊಗ್ಗ, ಬೆಂಗಳೂರಿನಲ್ಲಿ ನೂರಾರು ಕೋಟಿ ರೂ. ಆಸ್ತಿ ಮಾಡಿರುವ ಆರೋಪ ಕೇಳಿಬಂದಿದೆ. ಉಮೇಶ್ ವಿಜಯನಗರದಲ್ಲಿ ಒಂದು ಭವ್ಯ ಮನೆಯ ನಿರ್ಮಾಣ ಮಾಡುತ್ತಿದ್ದಾನೆ. 60*120 ವಿಸ್ತೀರ್ಣದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಹಲವು ವರ್ಗಾವಣೆಗಳು, ಟೆಂಡರ್ ಡೀಲ್ ಗಳಲ್ಲಿ ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ.

ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರಗೆ ಉಮೇಶ್ ಪಿಎ ಆಗಿದ್ದ. ತನ್ನೊಂದಿಗೂ ಅರವಿಂದ್ ಎಂಬುವವನನ್ನು ಪಿಎಯಾಗಿ ಇಟ್ಟುಕೊಂಡಿದ್ದ. ಶಿವಮೊಗ್ಗದ ಡೀಲ್ ಗಳನ್ನು ಅರವಿಂದ್ ನೋಡಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ಅರವಿಂದ್ ಹಾಗೂ ಇನ್ನೂ ಇಬ್ಬರ ಜೊತೆ ಸೇರಿ ಡೀಲ್ ವ್ಯವಹಾರ ಮಾಡುತ್ತಿದ್ದಾನೆ ಎನ್ನುವುದು ಈಗ ಬಂದಿರುವ ಆರೋಪ. ಇದನ್ನೂ ಓದಿ: 2023ರಲ್ಲೂ ಬೊಮ್ಮಾಯಿ ಸಿಎಂ ಆಗಿ ದಸರಾ ಉದ್ಘಾಟಿಸಲಿದ್ದಾರೆ: ಪ್ರತಾಪ್ ಸಿಂಹ

ಆ ಇಬ್ಬರ ಪೈಕಿ ಒಬ್ಬ ಬಿ.ಎಸ್.ಯಡಿಯೂರಪ್ಪನವರಿಗೆ ಗನ್ ಮ್ಯಾನ್ ಆಗಿದ್ದವ. ಮತ್ತೊಬ್ಬ ವಿಧಾನಸೌಧದಲ್ಲಿ ಈಗ ಗುತ್ತಿಗೆ ನೌಕರ. ವರ್ಗಾವಣೆ, ಟೆಂಡರ್ ಡೀಲ್ ಗೆ ಇಳಿದ ಮೇಲೆ ರಹಸ್ಯ ನಡೆ ಅನುಸರಿಸುತ್ತಿದ್ದ. ತನ್ನ ಗುಪ್ತ ವ್ಯವಹಾರಗಳ ಬಗ್ಗೆ ಉಮೇಶ್ ರಹಸ್ಯ ಕಾಪಾಡುತ್ತಿದ್ದ. ಉಮೇಶ್ ಬಿ.ಎಸ್.ಯಡಿಯೂರಪ್ಪನವರಿಗೆ ಪಿಎ ಆಗಿದ್ದಾಗ ಸರ್ಕಾರಿ ಕಾರಲ್ಲೇ ಓಡಾಡುತ್ತಿದ್ದ, ಡೀಲ್ ನಡೆಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *