ಬೆಂಗಳೂರು: ಪುನೀತ್ ರಾಜ್‍ಕುಮಾರ್ ಹಾಗೂ ಶಿವರಾಜ್‍ಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ಅಂತಿಮ ಹಂತಕ್ಕೆ ತಲುಪಿದೆ.
ಪುನೀತ್ ರಾಜ್‍ಕುಮಾರ್ ಅವರ ಮನೆಯಲ್ಲಿರುವ ಐಟಿ ಅಧಿಕಾರಿಗಳು ಇನ್ನೂ ಕೆಲವೇ ಗಂಟೆಗಳಲ್ಲಿ ಹೊರಡಲಿದ್ದಾರೆ. ತಮಗೆ ಬೇಕಾದ ಕಾಗದ ಪತ್ರಗಳು, ದಾಖಲೆಗಳು ಹಾಗೂ ಹೂಡಿಕೆ ಪತ್ರಗಳನ್ನು ಅಧಿಕಾರಿಗಳು ಪ್ಯಾಕ್ ಮಾಡಿಕೊಂಡಿದ್ದಾರೆ. ಪುನೀತ್ ಹಾಗೂ ಅವರ ಪತ್ನಿ ಅಶ್ವಿನಿ ಸಮ್ಮುಖದಲ್ಲಿ ಐಟಿ ಅಧಿಕಾರಿಗಳು ಬ್ಯಾಂಕ್ ಸ್ಟೇಟ್‍ಮೆಂಟ್ ಬಗ್ಗೆ ಮಾಹಿತಿ ಪಡೆದುಕೊಂಡು ಪಂಚನಾಮೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಐಟಿ ದಾಳಿ ವೇಳೆ ಬೆಳಕಿಗೆ ಬಂತು ಮಹತ್ವದ ವಿಚಾರಗಳು
ಐಟಿ ಅಧಿಕಾರಿಗಳು ಪಂಚನಾಮೆ ಪಡೆದ ಬಳಿಕ ದಾಳಿಯ ಅಂತಿಮ ಪ್ರಕ್ರಿಯೆ ಮುಗಿಸಿ ಹೊರಡಲಿದ್ದಾರೆ. ದಾಳಿ ಬಗ್ಗೆ ಪುನೀತ್ ಹಾಗೂ ಪತ್ನಿಗೆ ವಿವರಣೆ ನೀಡಿ, ಅವರಿಂದ ಕೆಲವು ಕಾಗದಗಳಿಗೆ ಸಹಿ ಪಡೆದು ಹೊರಡಲಿದ್ದಾರೆ. ಅಲ್ಲದೇ ಪುನೀತ್ ಅವರು ‘ನಟಸಾರ್ವಭೌಮ’ ಚಿತ್ರದ ಆಡಿಯೋ ಲಾಂಚ್‍ಗಾಗಿ ನಾಳೆ ಹುಬ್ಬಳ್ಳಿಗೆ ತೆರಳಲು ಐಟಿ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.
ಪಂಚನಾಮೆ ಮಾಡುವ ಸಲುವಾಗಿ ಐಟಿ ಇಲಾಖೆ ಜಂಟಿ ಆಯುಕ್ತರು ಪುನೀತ್ ರಾಜ್‍ಕುಮಾರ್ ಅವರ ಮನೆಗೆ ಆಗಮಿಸಿದ್ದಾರೆ. ಜಂಟಿ ಆಯುಕ್ತರ ಸಮ್ಮುಖದಲ್ಲಿ ಪಂಚನಾಮೆ ಪ್ರಕ್ರಿಯೆ ನಡೆಯುತ್ತದೆ. ಪಂಚನಾಮೆ ಮುಗಿದ ಬಳಿಕ ಐಟಿ ಆಧಿಕಾರಿಗಳು ಪುನೀತ್ ಅವರ ಮನೆಯಿಂದ ಹೊರಡಲಿದ್ದಾರೆ. ಇದನ್ನೂ ಓದಿ: ಆ ಒಂದು ಡೈರಿಯಿಂದ ಸ್ಟಾರ್ ನಟರ ಮನೆ ಮೇಲೆ ದಾಳಿ!
ಇತ್ತ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮನೆಯ ಐಟಿ ರೇಡ್ ಕೊನೆಯ ಹಂತಕ್ಕೆ ತಲುಪಿದೆ. 10 ಜನ ಐಟಿ ಅಧಿಕಾರಿಗಳ ತಂಡ ಬೆಳಗ್ಗಿನಿಂದ ನಿರಂತರ ವಿಚಾರಣೆ ಮಾಡುತ್ತಿದೆ. ಮನೆಯಲ್ಲಿನ ಕಂಪ್ಯೂಟರ್ ಹಾರ್ಡ್ ಡ್ರೈವ್ ಸೇರಿದಂತೆ ಅನೇಕ ದಾಖಲೆಗಳ ಅಧಿಕಾರಿಗಳು ಸಾಫ್ಟ್ ಕಾಪಿ ಪಡೆದಿದ್ದಾರೆ. ಅಗತ್ಯ ದಾಖಲೆಗಳನ್ನು ತೆಗೆಯಲು ಸಹಾಯ ಮಾಡಿದ ತಂತ್ರಜ್ಞರು ಸದ್ಯ ಮನೆಯಿಂದ ಹೊರ ಹೋಗಿದ್ದಾರೆ. ಸದ್ಯ ಐಟಿ ತಂಡ ದಾಖಲೆಗಳನ್ನು ಜೋಡಿಸುತ್ತಿದ್ದಾರೆ. ಎಲ್ಲಾ ದಾಖಲೆಗಳನ್ನು ಒಟ್ಟುಗೂಡಿಸಿ ಪಂಚನಾಮೆ ಮಾಡಲಾಗುತ್ತದೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಸ್ಟಾರ್ ನಟರು
ತಮ್ಮ ನೆಚ್ಚಿನ ನಟನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಕ್ಕೆ ಅಭಿಮಾನಿಗಳು ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್, ಶಿವಣ್ಣ, ಪುನೀತ್‍ಗೆ ಜೈಕಾರ ಹಾಕುತ್ತ ಅಭಿಮಾನಿಗಳು ಮನೆ ಮುಂದೆ ಕುಳಿತಿದ್ದಾರೆ. ಬೇಕೆ ಬೇಕು ಶಿವಣ್ಣ ಬೇಕು ಎಂದು ಘೋಷಣೆ ಕೂಗುತ್ತಿದ್ದಾರೆ.