ಬಾಗಲಕೋಟೆ/ವಿಜಯಪುರ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಮುಖಂಡಿರಗೆ ಶಾಕ್ ನೀಡಿದ್ದು, ಸಚಿವ ಶಿವಾನಂದ ಆಪ್ತರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಸಚಿವರ ಆಪ್ತರಾದ ಯಾಸೀನ್ ತುಂಬರಮಟ್ಟಿ, ಆರೀಫ್ ಕಾರಗಲೇಕರ್ ಅವರ ನಿವಾಸ ಮೇಲೆ 10 ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಬಾಗಲಕೋಟೆಯ ವಿವೇಕಾನಂದ ನಗರದಲ್ಲಿ ಆರೀಫ್ ಅವರ ಮನೆ ಮೇಲೆ ದಾಳಿ ನಡೆದಿದೆ.
ಆರೀಫ್ ಕಾರ್ಲೆಕರ್ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಆಪ್ತರಾಗಿದ್ದು, ಯಾಸೀನ್ ತುಂಬರಮಟ್ಟಿ ಡಿಸಿಸಿ ಬ್ಯಾಂಕ್ ನಲ್ಲಿ ಎಫ್ ಡಿಸಿ ಆಗಿದ್ದಾರೆ. ನವನಗರದ ಡಿಸಿಸಿ ಬ್ಯಾಂಕ್ ನಿಂದ 1 ಕೋಟಿ ರೂ. ಹಣ ಡ್ರಾ ಮಾಡಿಕೊಂಡು ತೆರಳುವಾಗ ದಾಳಿ ನಡೆದಿದೆ ಎನ್ನಲಾಗಿದೆ. ಬಾಗಲಕೋಟೆಯ ವಿವೇಕಾನಂದ ನಗರದಲ್ಲಿರುವ ಆರೀಫ್ ಹಾಗೂ ಹಳಪೇಟೆಯಲ್ಲಿರುವ ಯಾಸೀನ್ ತುಂಬರಮಟ್ಟಿ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಆರೀಫ್ ಹಾಗೂ ಯಾಸೀನ್ ಬಾಗಲಕೋಟೆ ಡಿಸಿಸಿ ಬ್ಯಾಂಕ್ ನೌಕರರಾಗಿದ್ದು, ಬ್ಯಾಂಕಿನಲ್ಲೂ ಐಟಿ ಅಧಿಕಾರಿ ತಂಡ ದಾಖಲೆಗಳ ಪರಿಶೀಲನೆ ನಡೆಸಿದೆ. ಅಲ್ಲದೇ ಇಬ್ಬರಿಗೂ ಸಂಬಂಧಿಸಿದ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.
ಇತ್ತ ವಿಜಯಪುರ ಲೋಕಸಭೆ ಮೈತ್ರಿಯ ಜೆಡಿಎಸ್ ಅಭ್ಯರ್ಥಿ ಡಾ. ಸುನಿತಾ ಚವ್ಹಾಣ ಅವರ ಸಂಬಂಧಿಕರ ನಿವಾಸ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು. ಜಿಲ್ಲೆ ಇಂಡಿ ತಾಲೂಕಿನ ತಂಬಾ ಗ್ರಾಮದಲ್ಲಿನ ನಿವಾಸಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಖಾಸಗಿ ಕಾರಿನಲ್ಲಿ ತೆರಳಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ವೇಳೆ ಅಂದಾಜು 12 ಲಕ್ಷ ರೂ. ದೊರೆತಿರುವ ಬಗ್ಗೆ ಮಾಹಿತಿ ಲಭಿಸಿದೆ. ಶುಕ್ರವಾರ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ವಿಜಯಪುರದಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಜಿಲ್ಲೆಯಿಂದ ಹೋದ ತಕ್ಷಣವೇ ದಾಳಿ ನಡೆದಿದೆ.