ಬೆಂಗಳೂರು: ಕಾಲಾ ಸಿನಿಮಾ ಬಿಡುಗಡೆ ಪೊಲೀಸ್ ರಕ್ಷಣೆ ನೀಡಲು ಹೈಕೋರ್ಟ್ ಸೂಚನೆ ನೀಡಿದೆ, ಆದರೆ ಪ್ರತಿಭಟನೆ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾರಾ ಗೋವಿಂದು ಹೇಳಿದ್ದಾರೆ.
ನಟ ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಬಿಡುಗಡೆಗೆ ಕೋರ್ಟ್ ಪೊಲೀಸ್ ರಕ್ಷಣೆ ನೀಡುವಂತೆ ಆದೇಶ ನೀಡಿದ ಬಳಿಕ ಕರವೇ ಪ್ರವೀಣ್ ಶೆಟ್ಟಿ ಸೇರಿದಂತೆ ಕನ್ನಡಪರ ಹೋರಾಟಗಾರರು ಸಾ.ರಾ ಗೋವಿಂದ್ ಅವರ ನೇತೃತ್ವದಲ್ಲಿ ಸಿಎಂ ಕುಮಾರಸ್ವಾಮಿ ಕೃಷ್ಣ ಗೃಹ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸಿಎಂ ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಾರಾ ಗೋವಿಂದ್, ಸಿನಿಮಾ ಬಿಡುಗಡೆಗೆ ರಕ್ಷಣೆ ಕೊಡಿ ಎಂದು ಕೋರ್ಟ್ ಸೂಚನೆ ನೀಡಿದೆ. ಆದರೆ ಕನ್ನಡ ಪರ ಸಂಘಟನೆಗಳಿಗೆ ಪ್ರತಿಭಟನೆ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ. ಪ್ರತಿಭಟನೆ ಮಾಡೋದು ನಮ್ಮ ಹಕ್ಕು. ಪೊಲೀಸರು ಯಾವುದೇ ಪ್ರಕರಣ ದಾಖಲಿಸಿದರೂ ಭಯವಿಲ್ಲ. ಈ ವಿಚಾರದಲ್ಲಿ ಜೈಲಿಗೂ ಹೋಗಲು ಸಿದ್ಧ. ಕಾಲಾ ಸಿನಿಮಾ ಬಿಡುಗಡೆಯನ್ನು ತಡೆದು ನಿಲ್ಲಿಸುತ್ತೇವೆ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ನಟ ರಜಿನಿಕಾಂತ್ ಅವರು ನೀಡಿರುವ ಹೇಳಿಕೆಗಳು ಸರಿಯಿಲ್ಲ. ಅದ್ದರಿಂದ ಕಾಲಾ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಸಾರಾ ಗೋವಿಂದು ಅವರು ಮನವಿ ಮಾಡಿದ್ದಾರೆ.