ವಿಜಯಪುರ: ಗಾಂಧಿ ಹೆಸರು ತೆಗೆದು ರಾಮ ಅಥವಾ ರಾಮನ ಹೆಸರು ತೆಗೆದು ಬೇರೆ ಯಾರದ್ದೋ ಹೆಸರು ಹಾಕೋದು ಸರಿಯಲ್ಲ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ವಾಗ್ದಾಳಿ ನಡೆಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಿಂದ ಗಾಂಧಿಜಿ ಹೆಸ್ರು ಬದಲಾವಣೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಜನೆಯನ್ನ ನಿಧಾನವಾಗಿ ಕೊಲೆ ಮಾಡುತ್ತಿದ್ದಾರೆ. ರಾಮನ ಹೆಸರಿಗೆ ಬದಲು ಮಾಡಿದ ಮೇಲಾದರೂ ಯೋಜನೆಯನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ರಾಮ ದೇವರ ಹೆಸರು ಇಟ್ಟು, ಅದನ್ನು ಮುಗಿಸಿ ಬಿಡುತ್ತಾರೆ. ರಾಮನ ಹೆಸರಿನ ಮೇಲೆ ಶೂನ್ಯ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ರೈತರ ಅಭಿವೃದ್ಧಿಗೆ ರಾಜ್ಯ, ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಬೇಕು: ಚಲುವರಾಯಸ್ವಾಮಿ
ದ್ವೇಷ ಭಾಷಣ ನಿಷೇಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದ್ವೇಷ ಭಾಷಣ ನಿಷೇಧಕ್ಕೆ ಯಾಕೆ ವಿರೋಧ ಮಾಡಬೇಕು. ದ್ವೇಷ ಭಾಷಣ ಮಾಡುವವರೇ ಅದನ್ನ ವಿರೋಧ ಮಾಡುತ್ತಾರೆ. ಕುಂಬಳಕಾಯಿ ಕಳ್ಳ ಅಂದರೆ ಬಿಜೆಪಿಯವರು ಯಾಕೆ ಬೆನ್ನು ಮುಟ್ಟಿ ನೋಡಿಕೊಳ್ಳಬೇಕು. ಯಾರೇ ದ್ವೇಷ ಭಾಷಣ ಮಾಡಿದರೂ ಇದು ಅನ್ವಯಿಸುತ್ತದೆ. ಕಾಂಗ್ರೆಸ್‌ನವರು ದ್ವೇಷ ಭಾಷಣ ಮಾಡಿದರೂ ಅನ್ವಯ, ನಾನು ಮಾಡಿದರೂ ಅನ್ವಯವಾಗುತ್ತದೆ ಎಂದಿದ್ದಾರೆ.

