ಹಾಸನ, ಮೈಸೂರು, ಮಂಡ್ಯ ಬಜೆಟ್ – ಸಮಗ್ರ ಕರ್ನಾಟಕ ಅಭಿವೃದ್ಧಿ ಚಿಂತನೆ ಇಲ್ಲ: ಸಿಟಿ ರವಿ, ಹರೀಶ್ ಪೂಂಜ

Public TV
2 Min Read
CT RAVI

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗುತ್ತಿದ್ದಂತೆ ಬಿಜೆಪಿ ನಾಯಕರು ಬಜೆಟ್ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರು ಶಾಸಕ ಸಿಟಿ ರವಿ. ಈ ಬಜೆಟ್ ನಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಚಿಂತನೆ ಇಲ್ಲ. ಸಮಗ್ರ ಕರ್ನಾಟಕಕ್ಕೆ ತೆರಿಗೆ ಹೊರಿಸಿ ಕೆಲ ಜಿಲ್ಲೆಗಳಿಗೆ ಮಾತ್ರ ವಿಶೇಷ ಕೊಡುಗೆಗಳನ್ನು ನೀಡಿದೆ. ಇದರಿಂದ ಒಂದು ಕಣ್ಣಿಗೆ ಸುಣ್ಣ ಹಾಗೂ ಒಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿಯನ್ನು ಅನುಸರಿಸಿದೆ. ಈ ಕುರಿತು ಬಿಜೆಪಿ ವಿಧಾನಸಭೆಯ ಹೊರಗೆ ಹಾಗೂ ಒಳಗೂ ಇದರ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡುತ್ತದೆ ಎಂದರು.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಜೆಟ್ ನಲ್ಲಿ ಕರಾವಳಿಯ ಜಿಲ್ಲೆಗಳನ್ನು ಮರೆತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರ ಬಗ್ಗೆ ಕುಮಾರಸ್ವಾಮಿ ಚಕಾರವೆತ್ತಿಲ್ಲ. ಅಲ್ಲದೇ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅವ್ಯಾಹತವಾಗಿ ಮಳೆ ಆಗಿದೆ. ಅಡಿಕೆ ಬೆಳೆಗಾರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಎಂಡೋ ಪೀಡಿತರಿ ಯಾವುದೇ ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಟ್ಟಿಲ್ಲ. ಇದರಿಂದ ಕುಮಾರಸ್ವಾಮಿ ಸರ್ಕಾರ ಎಂಡೋಪೀಡಿತರ ಕುಟುಂಬದವರ ಶಾಪವನ್ನು ಎದುರಿಸಬೇಕಾಗುತ್ತದೆ. ಇದು ಕೇವಲ ಐದು ಜಿಲ್ಲೆಗೆ ಸೀಮಿತವಾಗಿರುವ ಬಜೆಟ್ ಎಂದು ಹೇಳಿದರು.

ಕುಮಾರಸ್ವಾಮಿಯವರು ಉತ್ತರಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಭಾವ ಇಲ್ಲ ಎನ್ನುವ ಕಾರಣಕ್ಕೆ ಈ ಜಿಲ್ಲೆಗಳನ್ನು ತಮ್ಮ ಬಜೆಟ್ ನಲ್ಲಿ ಮರೆತಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಫೇಸ್‍ಬುಕ್ ನಲ್ಲಿ ಪೋಸ್ಟ್ ಪ್ರಕಟಿಸಿ ಹರೀಶ್ ಪೂಂಜಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಇಂದು ವಿಧಾನಸಭೆಯಲ್ಲಿ ಮಂಡನೆಯಾಗಿದ್ದು ರಾಜ್ಯ ಬಜೆಟ್ ಅಂದರೆ ಅದು ರಾಜ್ಯಕ್ಕೆ ಮಾಡುವ ಅವಮಾನ. ಇದು ಹಾಸನ, ಮಂಡ್ಯ, ಮೈಸೂರು ಭಾಗದ ಬಜೆಟ್, ಪ್ರಾದೇಶಿಕ ಅಸಮತೋಲನೆ ಹೆಚ್ಚಿಸುವ, ಜೆಡಿಎಸ್ ಪಕ್ಷಕ್ಕೆ ಮತ ನೀಡಿದವರಿಗಾಗಿ ಮಾತ್ರ ಮಾಡಿದ ಬಜೆಟ್. ಇದೊಂದು ಸಾಂದರ್ಭಿಕ ಶಿಶುವಿನ ಅಸ್ತವ್ಯಸ್ತ, ಅಸಮರ್ಥ, ಅಸಾಂದರ್ಭಿಕ ಹಾಗೂ ಅನ್ಯಾಯದ ಬಜೆಟ್.

ಕರಾವಳಿಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಕರಾವಳಿಯ ಅಭಿವೃದ್ಧಿಗೆ ಯಾವುದೇ ಯೋಜನೆಯನ್ನು ಮಾಡದ, ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಹೆಚ್ಚಿಸಿ, ವಿದ್ಯುತ್ತಿನ ಬೆಲೆಯನ್ನು ಏರಿಸಿ ಜನಸಾಮಾನ್ಯರ ಸಮಸ್ಯೆಗಳನ್ನು ಹೆಚ್ಚಿಸಲೆಂದೇ ಮಾಡಿದ ಬಜೆಟ್ ಇದು.

ದಕ್ಷಿಣ ಕನ್ನಡದ ಬಹುವರ್ಷದ ಬೇಡಿಕೆಯಾದ ಎಂಡೋ ಪೀಡಿತರ ಪುನರ್ವಸತಿಗೆ, ಅಡಿಕೆ ಮತ್ತು ರಬ್ಬರ್ ಬೆಳೆಗಾರರ ಸಮಸ್ಯೆಗಳಿಗೆ, ಪ್ರಾಕೃತಿಕ ವಿಕೋಪಗಳಿಂದ ತೊಂದರೆಗೊಳಗಾದವರಿಗೆ ಪರಿಹಾರ ನೀಡುವ ಯಾವುದೇ ಯೋಜನೆಗಳು ಇಲ್ಲದ ಬಜೆಟ್. ದೂರದೃಷ್ಟಿ, ಸಮದೃಷ್ಟಿ ಇಲ್ಲದ ಅಸಮಾನತೆಯ ಬಜೆಟ್. ಇನ್ನು ಕರಾವಳಿ ಜಿಲ್ಲೆಗಳಿಗೆ ಕೈಗಾರಿಕೆ ಇನ್ನಿತರ ಅಭಿವೃದ್ಧಿ ಯೋಜನೆಗಳಂತೂ ಮರಿಚಿಕೆಯೇ ಆಗಿದೆ.

ಇಂತಹ ಕರಾವಳಿ ವಿರೋಧಿ ಬಜೆಟ್ ಮಂಡನೆಯಾಗಿರುವುದು ರಾಜ್ಯದ ಇತಿಹಾಸದಲ್ಲಿ ಇದು ಮೊದಲ ಬಾರಿ. ಇಂಥಹ ಬಜೆಟ್ ಮಂಡನೆ ಆದ ಮೇಲೂ ಅಧಿಕಾರದಲ್ಲಿ ಇರಲು ಜಿಲ್ಲೆಯ ಉಸ್ತುವಾರಿ ಸಚಿವರಿಗೆ ನಾಚಿಗೆಯಾಗಲ್ಲವೇ? ನಿಮಗೆ ನಿಜವಾಗಿಯೂ ಕರಾವಳಿಯ ಮೇಲೆ, ದಕ್ಷಿಣ ಕನ್ನಡ ಜಿಲ್ಲೆಯ ಜನರ ಮೇಲೆ ಒಂದಿನಿತು ಪ್ರೀತಿ ಗೌರವ ಇದ್ದರೆ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಸರಕಾರದಿಂದ ಹೊರಗೆ ಬನ್ನಿ ಉಸ್ತುವಾರಿ ಸಚಿವರೇ.

 

 

https://www.facebook.com/100011886302170/posts/381618182244389/

Share This Article
Leave a Comment

Leave a Reply

Your email address will not be published. Required fields are marked *