ಬೆಂಗಳೂರು: ಬಿಜಿಪಿಯವರದ್ದು ಪರಿವರ್ತನಾ ರ‍್ಯಾಲಿಯಲ್ಲ, ಅದು ನಾಟಕ ರ‍್ಯಾಲಿ ಎಂದು ಕಮಲ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗಿನ ಮಹತ್ವದ ಸಭೆ ಬಳಿಕ ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಮಾಡಿದ ಪಾಪವನ್ನು ಪಶ್ಚಾತ್ತಾಪ ಮಾಡಿಕೊಳ್ಳಲು ರ‍್ಯಾಲಿ ಮಾಡುತ್ತಿದ್ದಾರೆ. ಹಿಂದುತ್ವದ ಹೆಸರಲ್ಲಿ ಬಿಜೆಪಿ ಅವರು ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಸಮಾಜದಲ್ಲಿ ನೆಮ್ಮದಿ, ಶಾಂತಿ ಕೆಡಿಸುತ್ತಿದ್ದಾರೆ. ಹೀಗಾಗಿ ಮೊದಲು ಅವರ ಪರಿವರ್ತನೆ ಆಗಬೇಕು ಎಂಂದು ಕಿಡಿಕಾರಿದರು.
Advertisement
ರಾಜ್ಯದ ಜನರು ಪ್ರಬುದ್ಧರಾಗಿದ್ದಾರೆ, ಅವರು ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಜನರ ದೃಷ್ಟಿಯಿಂದ ಈ ರ‍್ಯಾಲಿ ಅನಗತ್ಯ. ರಾಜ್ಯದ ಜನ ಕಾಂಗ್ರೆಸ್ ಅಧಿಕಾರಕ್ಕೆ ತರಲು ತೀರ್ಮಾನ ಮಾಡಿದ್ದಾರೆ. ನಾನು 30 ವರ್ಷಗಳಿಂದ ರಾಜ್ಯವನ್ನು ಸುತ್ತಿದ್ದೇನೆ. ಜನರ ನಾಡಿ ಮಿಡಿತ ನನಗೆ ಗೊತ್ತು. ಜನರು ಬಿಜೆಪಿ ಅವರಿಗೆ ಒಂದು ಬಾರಿ ಅಧಿಕಾರಕೊಟ್ಟಿದ್ದರು. ಅಧಿಕಾರ ಪಡೆದ ಬಿಜೆಪಿ ಹಗರಣ, ಅನೀತಿ, ಅನ್ಯಾಯ, ಅಕ್ರಮವನ್ನು ಜನ ಇನ್ನೂ ಮರೆತಿಲ್ಲ ಎಂದರು.
Advertisement
ಬಿಜೆಪಿಯ ಮೂರು ಮುಖ್ಯಮಂತ್ರಿಗಳು ಮಾಡಿದ್ದು ಏನೂ ಇಲ್ಲ. ರೆಡ್ಡಿಗಳ ಭ್ರಷ್ಟಾಚಾರ, ಯಡಿಯೂರಪ್ಪ ಹಣಕ್ಕೆ ಆಸೆಗೆ ಬಿದ್ದು ಅವರನ್ನು ಫ್ರೀ ಬಿಟ್ರು. ಸಂತೋಷ್ ಹೆಗ್ಡೆ ಬಳ್ಳಾರಿ ರಿಪಬ್ಲಿಕ್ ಅಂತ ವರದಿ ನೀಡಿದ್ರು. ಗಣಿ ಲೂಟಿ ಹೊಡೆದ ರೆಡ್ಡಿ ಬ್ರದರ್ಸ್ ಗೆ ಯಡಿಯೂರಪ್ಪ ಬೆಂಬಲ ನೀಡಿದರು ಎಂದು ಆರೋಪಿಸಿದರು.
Advertisement
ಲೂಟಿ ಸಾಧನೆ: ಅಮಿತ್ ಶಾ, ಯಡಿಯೂರಪ್ಪ ಇಬ್ಬರು ಜೈಲಿಗೆ ಹೋದವರು. ಅವರು ಎಂತಹ ಪರಿವರ್ತನೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಅಡ್ವಾಣಿ, ಜಗದೀಶ್ ಶೆಟ್ಟರ್, ಬಿಜೆಪಿ ನಾಯಕರ ವಿರುದ್ಧ ಏನ್ ಮಾತಾಡಿದ್ರು ಅಂತ ನೆನಪು ಮಾಡಿಕೊಳ್ಳಬೇಕು. ಬಿಜೆಪಿ ಅಧಿಕಾರದಲ್ಲಿದ್ದಾಗ ಲೂಟಿ ಮಾಡಿದ್ದೇ ಅವರ ಸಾಧನೆ. ಕೃಷಿ ಬಜೆಟ್ ಮಂಡಿಸಿದ್ದೇ ಅಂತ ಯಡಿಯೂರಪ್ಪ ಹೇಳುತ್ತಾರೆ. ಕೃಷಿಗೆ ಯಾರು ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಅಂತ ಚರ್ಚೆಗೆ ಬರಲಿ. ರೈತರ ಸಾಲ ಮನ್ನಾ ಮಾಡಲು ವಿಧಾನಸೌಧ ಮುತ್ತಿಗೆ ಹಾಕ್ತೀನಿ ಅಂತಾರೆ. ಆದರ ಬದಲು ದೆಹಲಿಗೆ ಹೋಗಿ ಸಂಸತ್ ಮುತ್ತಿಗೆ ಹಾಕಿ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಸವಾಲ್ ಹಾಕಿದರು.
Advertisement
ಉತ್ತರ ಬಂದಿಲ್ಲ: ಮಹದಾಯಿ ವಿವಾದ ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಲು ನ್ಯಾಯಾಲಯ ಸೂಚಿಸಿತು. ನಾನು ಪತ್ರ ಬರೆದಿದ್ದೇನೆ, ಆದರೆ ಅದಕ್ಕೆ ಗೋವಾ, ಮಹಾರಾಷ್ಟ್ರದಿಂದ ಯಾವುದೇ ಉತ್ತರ ಬಂದಿಲ್ಲ. ಬಿಜೆಪಿ ಪರಿವರ್ತನಾ ರ‍್ಯಾಲಿ ಮುಗಿಯೊಳಗೆ ಸಮಸ್ಯೆ ಬಗೆಹರಿಸುತ್ತೇನೆ ಎಂದು ಯಡಿಯೂರಪ್ಪ ಹೇಳ್ತಾರೆ. ಇದೆಲ್ಲ ಆಗದೇ ಇರೋ ಮಾತು. ಮೊದಲು ಅ ರಾಜ್ಯದ ಮುಖ್ಯಮಂತ್ರಿಗಳನ್ನ ಒಪ್ಪಿಸಲಿ. ಆಮೇಲೆ ನಾವು ವಿರೋಧ ಪಕ್ಷದವರನ್ನ ಒಪ್ಪಿಸುತ್ತೇವೆ. ಸುಮ್ಮನೆ ಬಿಜೆಪಿ ಅವರು ನಮ್ಮ ಮೇಲೆ ಆರೋಪ ಮಾಡ್ತಾರೆ ಅಷ್ಟೇ ಎಂದು ಹೇಳಿದರು.
ಇವುಗಳನ್ನು ಹೇಳಲಿ: ಅಚ್ಚೇ ದಿನ ಬಂದಿರೋದು ಅಂಬಾನಿ, ಅದಾನಿ, ಅಮಿತ್ ಶಾ ಆತನ ಮಗನಿಗೆ ಮಾತ್ರ. ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದ್ದೇವೆ ಅಂತ ಹೇಳಲಿ. ನೋಟ್ ಬ್ಯಾನ್ ನಿಂದ ಸಮಸ್ಯೆ ಆಗಿದೆ ಅಂತ ಹೇಳಲಿ. ಜಿಎಸ್‍ಟಿ ಗೊಂದಲ ಇನ್ನು ನಿವಾರಣೆ ಮಾಡಿಲ್ಲ ಇದೇ ಬಿಜೆಪಿಯ ಸಾಧನೆ. ಅತ್ಯಾಚಾರ ಮಾಡಿ ಜೈಲಿಗೆ ಹೋಗಿದ್ದು, ಬ್ಲೂ ಫಿಲ್ಮ್ ನೋಡಿ ಅಧಿಕಾರ ಕಳೆದುಕೊಂಡದ್ದು, ಗಣಿ ಹಣ ಲೂಟಿ ಹೊಡೆದಿದ್ದೇವೆ ಅಂತ ಜನರ ಮುಂದೆ ಹೋಗಿ ಹೇಳಲಿ. ತಮ್ಮ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ. ರೈತರ ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿಗೆ ಇಲ್ಲ. ರ್ಯಾಲಿಯಲ್ಲಿ ಬಿಜೆಪಿಯವರು ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಬಿಜೆಪಿಯಲ್ಲಿ ಯಾರು ಜೈಲಿಗೆ ಹೋಗಿಲ್ಲ ಎಂದು ಪ್ರಶ್ನಿಸಿದ ಅವರು ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸುರೇಶ್ ಬಾಬು, ರೆಡ್ಡಿ, ನಾಗೇಂದ್ರ, ಅಮಿತ್ ಶಾ ಜೈಲಿಗೆ ಹೋಗಿ ಬಂದಿದ್ದಾರೆ. ನಮ್ಮಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ರಾಜ್ಯದ ಜನ ರಾಜಕೀಯವಾಗಿ ಪ್ರಜ್ಞಾವಂತ ಜನ. ಜಾತ್ಯಾತೀತತೆಯಲ್ಲಿ ಜನ ನಂಬಿಕೆ ಇಟ್ಟಿದ್ದಾರೆ. ಯಾರನ್ನ ಗೆಲ್ಲಿಸಬೇಕು ಅನ್ನೋದು ಅವರಿಗೆ ಗೊತ್ತು. ಪ್ರಧಾನಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಕರೆದುಕೊಂಡು ಬಂದ್ರು ಏನು ಆಗೊಲ್ಲ. ನಮ್ಮ ಕಾರ್ಯಕ್ರಮಗಳನ್ನ ಜನ ಮೆಚ್ಚಿದ್ದಾರೆ. ಜನ ಮತ್ತೆ ನಮಗೇ ಆಶೀರ್ವಾದ ಮಾಡೋಕೆ ನಿರ್ಧಾರ ಮಾಡಿದ್ದಾರೆ. ನಾವೇ 2018 ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಬಹಿರಂಗ ಚರ್ಚೆಗೆ ಸಿದ್ದ: ನಮ್ಮ ಅಭಿವೃದ್ಧಿ ಬಗ್ಗೆ ಬಿಜೆಪಿಯವರು ಚರ್ಚೆಗೆ ಬರಲಿ. ನಮ್ಮ ಅಭಿವೃದ್ಧಿ ಕೆಲಸ ಅವರ ಅವರ ಕೆಲಸಗಳ ಬಗ್ಗೆ ಚರ್ಚೆ ಮಾಡಲಿ ಎಂದು ಬಿಜೆಪಿ ನಾಯಕರಿಗೆ ಬಹಿರಂಗವಾಗಿ ಸವಾಲ್ ಹಾಕಿದರು.