ಮಫ್ತಿ (Mufti) ಸಿನಿಮಾದ ನಂತರ ನರ್ತನ್ (Nartan) ಮೆಗಾ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಲಿದ್ದಾರೆ ಎಂದು ಅನೇಕ ಬಾರಿ ಸುದ್ದಿ ಆಯಿತು. ಈ ಸಿನಿಮಾಗೆ ಯಶ್ ಹೀರೋ ಎಂದೂ ಹೇಳಲಾಯಿತು. ಈ ಚಿತ್ರಕ್ಕಾಗಿ ನರ್ತನ್ ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂತು. ಆನಂತರ ಯಶ್ ಇವರ ಚಿತ್ರದಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ಹೊರ ಬಿದ್ದಿತು.
ಈ ನೋವಿನ ವಿಚಾರ ಆಚೆ ಬರುತ್ತಿದ್ದಂತೆಯೇ ನರ್ತನ್ ಮತ್ತೆ ಸದ್ದು ಮಾಡಿದರು. ಅದು ಮತ್ತೊಂದು ಮೆಗಾ ಸಿನಿಮಾದ ವಿಷಯಕ್ಕಾಗಿ. ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ವಿಷಯ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಕೇಳಿ ಬಂದಿತ್ತು. ಈ ವಿಷಯ ಕೂಡ ಸುಳ್ಳಾಗಲಿದೆ ಎನ್ನುವ ಆತಂಕ ಅವರ ಅಭಿಮಾನಿಗಳಲ್ಲಿತ್ತು. ಆದರೆ, ಅದು ನಿಜವಾಗಿದೆ. ಇದನ್ನೂ ಓದಿ: ಹಿಂದಿ ಚಿತ್ರರಂಗದಲ್ಲಿ ಸೌತ್‌ನಷ್ಟು ಶಿಸ್ತಿಲ್ಲ: ಕಾಜಲ್ ಅಗರ್‌ವಾಲ್
ಹೌದು, ನರ್ತನ್ ಟಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಪ್ರಶಾಂತ್ ನೀಲ್, ಎ.ಹರ್ಷ ನಂತರ ಮತ್ತೋರ್ವ ನಿರ್ದೇಶಕ ಟಾಲಿವುಡ್ ಸ್ಟಾರ್ ನಟನಿಗೆ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಇದು ಪಕ್ಕಾ ಮಾಹಿತಿ ಎಂದು ಸ್ವತಃ ನರ್ತನ್ ಅವರೇ ಹಂಚಿಕೊಂಡಿದ್ದಾರೆ. ಆದರೆ, ಆ ಸಿನಿಮಾ ಯಾವಾಗ ಬರುತ್ತದೆ ಎಂದು ಮಾತ್ರ ಹೇಳಿಕೊಂಡಿಲ್ಲ.
ಸದ್ಯ ಭೈರತಿ ರಣಗಲ್ (Bhairati Rangal) ಸಿನಿಮಾದ ಕೆಲಸದಲ್ಲಿ ನರ್ತನ್ ಬ್ಯುಸಿಯಾಗಿದ್ದಾರೆ. ಮೇ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಶಿವರಾಜ್ ಕುಮಾರ್ (Shivraj Kumar) ಮತ್ತು ನರ್ತನ್ ಕಾಂಬಿನೇಷನ್ ನ ಎರಡನೇ ಸಿನಿಮಾ ಇದಾಗಲಿದೆ. ಈ ಸಿನಿಮಾವನ್ನು ಸ್ವತಃ ಶಿವಣ್ಣ ಅವರೇ ತಮ್ಮ ಬ್ಯಾನರ್ ನಿಂದ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ನಂತರ ರಾಮ್ ಚರಣ್ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ ನರ್ತನ್.