ಮೈಸೂರು: ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪತ್ತೆ ಆಗಿರುವುದು ಸ್ಫೋಟಕ ವಸ್ತು ಅಲ್ಲ. ಬ್ಯಾಟರಿ ಹಾಗೂ ಸರ್ಕ್ಯೂಟ್ ಬೋರ್ಡ್ ಹೊಂದಿರುವ ಯುಪಿಎಸ್ ಪವರ್ ಬ್ಯಾಂಕ್ ನೋಡಿ ಜನ ಆತಂಕಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಯುಪಿಎಸ್ ಮಾದರಿಯ ಪವರ್ ಬ್ಯಾಂಕ್. ಇದರಲ್ಲಿ ಸರ್ಕ್ಯೂಟ್ ಇದೆ. ಇದರಿಂದ ಸ್ಫೋಟ ಸಾಧ್ಯವಿಲ್ಲ. ಸ್ಫೋಟಕ್ಕೆ ಇಷ್ಟೊಂದು ಶೆಲ್ ಅಗತ್ಯವಿಲ್ಲ. ಈ ರೀತಿಯ ಪವರ್ ಬ್ಯಾಂಕ್ ಇಟ್ಟು ಜನರನ್ನು ಭಯಪಡಿಸಲು ಯತ್ನಿಸಲಾಗಿದೆಯಾ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಸುಬ್ರಹ್ಮಣೇಶ್ವರ ರಾವ್ ಪಬ್ಲಿಕ್ ಟಿವಿ ಗೆ ತಿಳಿಸಿದ್ದಾರೆ.
ಇಷ್ಟು ಶೆಲ್ ಇರುವ ಪವರ್ ಬ್ಯಾಂಕ್ ಅನ್ನು ಬೆಂಕಿಗೆ ಎಸೆದರೆ ಮಾತ್ರ ಸ್ಪೋಟಗೊಳ್ಳುತ್ತೆ ಅಷ್ಟೇ ಎಂದು ವಿವರಿಸಿದ ಅವರು, ಇದನ್ನು ಬಸ್ ನಿಲ್ದಾಣದ ಬಳಿ ಇಟ್ಟವರು ಯಾರು? ಜನರನ್ನು ಹೆದರಿಸುವುದಕ್ಕೆ ಇಟ್ಟಿದ್ದರಾ? ಅಥವಾ ಬೇಡ ಎಂದು ಇಲ್ಲೇ ಎಸೆದು ಹೋಗಿದ್ದಾರಾ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಹೇಳಿದರು.
ಆಗಿದ್ದು ಏನು?
ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಇರುವ ಪೀಪಲ್ಸ್ ಪಾರ್ಕ್ ನಲ್ಲಿ ಎರಡು ಬಾಕ್ಸ್
ಗಳಲ್ಲಿ ಶೆಲ್ ಹಾಗೂ ವಯರ್ ತುಂಬಿದ ಬಾಕ್ಸ್ ಪತ್ತೆಯಾಗಿತ್ತು. ಇದನ್ನು ಕಂಡ ಸಾರ್ವಜನಿಕರು ಭಯಗೊಂಡು ಕಂಟ್ರೋಲ್ ರೂಂಗೆ ಕರೆಮಾಡಿದ್ದರು. ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಪರೀಶಿಲನೆ ನಡೆಸಿದ್ದರು.