– ಇದು ಉಪಚುನಾವಣೆಗಾಗಿ ಮಾಡಿರುವ ಗೊಂದಲ ಎಂದ ಸಚಿವ
ಗದಗ: ರೈತರ ಆಸ್ತಿ ವಕ್ಫ್ (Waqf Land) ಪಾಲಾಗುತ್ತಿದೆ ಎಂಬುದು ತಪ್ಪು ಕಲ್ಪನೆ. ಇದಕ್ಕೆ ಗದಗದಲ್ಲಿ ಆತಂಕ, ಟೀಕೆ ಟಿಪ್ಪಣಿಗೆ ಅವಕಾಶವಿಲ್ಲ. 689 ವಕ್ಫ್ ಆಸ್ತಿಗಳಿವೆ. ಯಾವುದೇ ರೈತರಿಗೆ ನೋಟಿಸ್ ಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಉಪಚುನಾವಣೆಗಾಗಿ ಮಾಡಿರುವ ಗೊಂದಲ, ಸೃಷ್ಟಿ ಹೊರತು ಬೇರೇನಲ್ಲ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ (H K Patil) ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು (ಬುಧವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ರೈತರ ಆಸ್ತಿ ಖಾತಾ ಬದಲಾವಣೆ ವಕ್ಫ್ ಆಗಿರುವ ಬಗ್ಗೆ ನಮ್ಮ ರೈತರಿಗೆ ಆತಂಕದ ಪರಿಸ್ಥಿತಿ ಇಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿ, ತಹಶಿಲ್ದಾರ್ ಸುದೀರ್ಘವಾಗಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು 2019 ರಿಂದ 2023ರ ಅವಧಿಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಭಂದಿಸಿದಂತೆ ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ ಎನ್ನುವ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ
ನಂತರ ಕಪ್ಪತ್ತಗುಡ್ಡ ವಿಷಯವಾಗಿ ಮಾತನಾಡಿ, ಅಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲ. ಕಪ್ಪತ್ತಗುಡ್ಡ ಸಂರಕ್ಷಣೆ ನಮ್ಮ ಹೊಣೆ. ಕಪ್ಪತ್ತಗುಡ್ಡ ಉಳಿಸಲು ನಮ್ಮ ಸರ್ಕಾರ ಬದ್ಧವಿದೆ. ಕಪ್ಪತ್ತಗುಡ್ಡ ಕಬ್ಬಿಣದ ಅದಿರು, ಬಂಗಾರ ಗಣಿಗಾರಿಕೆ, ಇತರೆ ಅದಿರು ತೆಗೆಯಲು ಬಳಕೆ ಆಗಬಾರದು ಎನ್ನುವ ಬಗ್ಗೆ ಸರ್ವಾನುಮತದ ನಿರ್ಣಯ ಜನತೆ ತೆಗೆದುಕೊಂಡಿದ್ದಾರೆ. ಈಗ ಹೇಗಿದೆ, ಹಾಗೆ ಉಳಿಸಬೇಕು ಎಂಬ ದೃಢವಾದ ಸಂಕಲ್ಪ ನಮ್ಮದು. ಆ ಸಂಕಲ್ಪ ಮುಂದುವರೆಸುವ ಪ್ರಯತ್ನ ಮಾಡುತ್ತೇವೆ. ಅಲ್ಲಿ ಪರಿಸರ ವೃದ್ಧಿ ಆಗಬೇಕು. ಪ್ರವಾಸಿಗರು ಬರಬೇಕು. ನೀವು ಪ್ರಕೃತಿ ಸೌಂದರ್ಯ ಸವಿಯಲು, ಆನಂದಕ್ಕಾಗಿ ಅಲ್ಲಿಗೆ ಹೋಗಬೇಕು ವಿನಃ ಬೇಟೆಯಾಡಲು ಅಲ್ಲ ಎಂಬ ಖಡಕ್ ಸಂದೇಶ ನೀಡಿದರು. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ: ಪರಮೇಶ್ವರ್