Tuesday, 17th July 2018

Recent News

29 ವಿದೇಶಿ ಉಪಗ್ರಗಳ ಉಡಾವಣೆಯಿಂದ ಇಸ್ರೋಗೆ ಬಂದ ಆದಾಯವೆಷ್ಟು ಗೊತ್ತಾ?

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್‍ಎಲ್‍ವಿ) ಅನೇಕ ಉಪಗ್ರಹಗಳನ್ನ ಕಕ್ಷೆಗೆ ಸೇರಿಸುವ ಮೂಲಕ ಇಸ್ರೋದ ಹಿರಿಮೆಯನ್ನು ಹೆಚ್ಚಿಸುವ ಜೊತೆ ಜೊತೆಗೆ ಕೋಟಿ ಕೋಟಿ ಆದಾಯವನ್ನೂ ತಂದುಕೊಟ್ಟಿದೆ.

ವಿವಿಧ ದೇಶಗಳ ಅನೇಕ ಉಪಗ್ರಹಗಳನ್ನ ಒಂದೇ ರಾಕೆಟ್‍ನಲ್ಲಿ ಹೊತ್ತೊಯ್ದು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಹಿರಿಮೆ ಒಂದೆಡೆಯಾದ್ರೆ ಇದು ಇಸ್ರೋವನ್ನ ಶ್ರೀಮಂತವನ್ನಾಗಿಸುತ್ತಿರುವುದು ಮತ್ತೊಂದು ಹೆಗ್ಗಳಿಕೆ.

ಕಳೆದ ತಿಂಗಳು 712 ಕೆಜಿಯ ಕಾರ್ಟೋಸ್ಯಾಟ್-2 ಉಪಗ್ರಹದ ಜೊತೆಗೆ 30 ಇತರೆ ಉಪಗ್ರಹಗಳನ್ನ ಇಸ್ರೋ ಉಡಾವಣೆ ಮಾಡಿತ್ತು. ಇವುಗಳಲ್ಲಿ 29 ವಿದೇಶಿ ಉಪಗ್ರಹಗಳಾಗಿದ್ದು, ಇಸ್ರೋದ ಮಾರ್ಕೆಟಿಂಗ್ ಸಂಸ್ಥೆ ಆಂಟ್ರಿಕ್ಸ್ ಕಾರ್ಪೋರೇಷನ್ ಲಿಮಿಟೆಡ್‍ಗೆ ಸುಮಾರು 45 ಕೋಟಿ ರೂ. ಆದಾಯ ತಂದುಕೊಡುವಲ್ಲಿ ನೆರವಾಗಿದೆ. ಈ ಬಗ್ಗೆ ಜುಲೈ 19ರಂದು ಸರ್ಕಾರ ಲೋಕಸಭೆಯಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಕಳೆದ ತಿಂಗಳ ಉಡಾವಣೆಗೂ ಮುಂಚೆ ಫೆಬ್ರವರಿಯಲ್ಲಿ ಇಸ್ರೋ ಒಂದೇ ಬಾರಿಗೆ 104 ಉಪಗ್ರಹಗಳನ್ನ ಉಡಾವಣೆ ಮಾಡಿ ಇತಿಹಾಸ ಸೃಷ್ಟಿಸಿತ್ತು. ಇದರಿಂದ ಇಸ್ರೋಗೆ ಕೋಟ್ಯಾಂತರ ರೂ. ಆದಾಯ ಬಂದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದ್ರೆ ಎಷ್ಟು ಆದಾಯ ಬಂದಿದೆ ಎಂಬ ಬಗ್ಗೆ ನಿರ್ದಿಷ್ಟವಾದ ಮಾಹಿತಿಯನ್ನ ಇಸ್ರೋ ಬಹಿರಂಗಪಡಿಸಿಲ್ಲ.

ಮಾರುಕಟ್ಟೆಯಲ್ಲಿ ಇತರೆ ಬಾಹ್ಯಾಕಾಶ ಸಂಸ್ಥೆಗಳಿದ್ದರೂ ಇಸ್ರೋ ಹಾಗೂ ಅದರ ವಾಣಿಜ್ಯ ಅಂಗವಾದ ಆಂಟ್ರಿಕ್ಸ್ ಬಾಹ್ಯಾಕಾಶ ಜಗತ್ತಿನಲ್ಲಿ ಭಾರತ ಹೆಸರು ಮಾಡಲು ಹಾಗೂ ಆರ್ಥಿಕವಾಗಿ ಇತರರಿಗಿಂತ ಮುಂಚೂಣಿಯಲ್ಲಿರಲು ನೆರವಾಗಿದೆ.

ವರದಿಯ ಪ್ರಕಾರ ಆಂಟ್ರಿಕ್ಸ್ ಸಂಸ್ಥೆ 2015-16ರಲ್ಲಿ ವಿದೇಶಿ ಉಪಗ್ರಹಗಳ ಉಡಾವಣೆ ಮೂಲಕ 230 ಕೋಟಿ ರೂ. ಆದಾಯ ಗಳಿಸಿದೆ. 2013 ರಿಂದ 2015ರವರೆಗೆ ಮಾಡಲಾದ ಇತರೆ 28 ಉಪಗ್ರಹಗಳ ಉಡಾವಣೆಯಿಂದ (80.6 ಮಿಲಿಯನ್ ಯೂರೋ) 600 ಕೋಟಿ ರೂ. ಆದಾಯ ಗಳಿಸಿದೆ.

Leave a Reply

Your email address will not be published. Required fields are marked *