ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿರುವ ಜಿಸ್ಯಾಟ್-30 ಉಪಗ್ರಹ ಇದೇ ಜನವರಿ 17ರಂದು ಉಡಾವಣೆಗೊಳ್ಳಲಿದೆ. ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದಲ್ಲಿರುವ ಕೌರು ಉಡ್ಡಯನ ಕೇಂದ್ರದಿಂದ ಉಪಗ್ರಹವನ್ನು ನಭಕ್ಕೆ ಹಾರಿಸಲಾಗುತ್ತದೆ.
ಜನವರಿ 17ರ ನಸುಕಿನ ಜಾವ 2 ಗಂಟೆ 35 ನಿಮಿಷಕ್ಕೆ ಏರಿಯನ್- 5 ರಾಕೆಟ್ ಜಿಸ್ಯಾಟ್-30 ಉಪಗ್ರಹವನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಲಿದೆ. ಉಪಗ್ರಹ ಒಟ್ಟು 3,357 ಕೆಜಿ ತೂಕವಿದ್ದು, ಈಗಾಗಲೇ ಜಿಸ್ಯಾಟ್ ಸರಣಿಯ ಒಟ್ಟು 14 ಉಪಗ್ರಹಗಳು ಕಾರ್ಯ ನಿರ್ವಹಿಸುತ್ತಿವೆ.
Advertisement
Advertisement
83 ಡಿಗ್ರಿ ರೇಖಾಂಶದಲ್ಲಿ ಉಪಗ್ರಹ ನೆಲೆಗೊಳ್ಳಲಿದ್ದು ಉತ್ತಮ ಗುಣಮಟ್ಟದ ಟಿವಿ, ಟೆಲಿ ಕಮ್ಯೂನಿಕೇಶನ್ ಮತ್ತು ಬ್ರಾಡ್‍ಕಾಸ್ಟಿಂಗ್ ಸೇವೆಗಳನ್ನು ನೀಡಲಿದೆ. ಉಪಗ್ರಹ ಟೆಲಿವಿಷನ್ ಅಪ್ ಲಿಂಕಿಂಗ್ ಹಾಗೂ ಡೌನ್‍ಲಿಂಕಿಂಗ್, ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (ಡಿಎಸ್‍ಎನ್‍ಜಿ), ಸೆಲ್ಯೂರಲ್ ಬ್ಯಾಕ್‍ಹೌಲ್ ಕನೆಕ್ಟಿವಿಟಿ, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು ಸೇರಿದಂತೆ ಅನೇಕ ಸೇವೆಗಳನ್ನು ಭಾರತ, ಗಲ್ಫ್ ದೇಶಗಳು, ಏಷ್ಯಾದ ಹಲವು ದೇಶಗಳು, ಆಸ್ಟ್ರೇಲಿಯಾದಲ್ಲಿ ಸಿ-ಬ್ಯಾಂಡ್ ಮೂಲಕ ಮುಂದಿನ 15 ವರ್ಷಗಳವರೆಗೆ ನೀಡಲಿದೆ. ಸಿ-ಬ್ಯಾಂಡ್ ಟ್ರಾನ್ಸ್‌ಪಾಂಡರ್ ಅನ್ನು ಪ್ರಾಥಮಿಕವಾಗಿ ದೂರಸಂಪರ್ಕ ಉದ್ದೇಶಕ್ಕಾಗಿ ಮತ್ತು ಮಾಹಿತಿ ಪ್ರಸರಣ ಸೇವೆಗಾಗಿ ಬಳಸಲಾಗುತ್ತದೆ. ಇದೇ ಸೇವೆಗಳ ನಿರ್ವಹಣೆಗಾಗಿ ಈ ಹಿಂದೆ ಹಾರಿಬಿಡಲಾಗಿದ್ದ `ಇನ್‍ಸ್ಯಾಟ್-4ಎ’ ಉಪಗ್ರಹದ ಬದಲಿಗೆ `ಜಿಸ್ಯಾಟ್-30′ ಅನ್ನು ಉಡಾವಣೆ ಮಾಡಲಾಗುತ್ತಿದೆ.
Advertisement
Advertisement
ನಭಕ್ಕೆ ಚಿಮ್ಮಲಿದೆ ಕನೆಕ್ಟ್ ಉಪಗ್ರಹ:
ಜಿಸ್ಯಾಟ್-30 ಜೊತೆ ಏರಿಯಾನ್ 5 ಕನೆಕ್ಟ್ ಉಪಗ್ರಹವನ್ನು ನಭಕ್ಕೆ ಸಾಗಿಸಲಿದೆ. ಆರಂಭದಲ್ಲಿ ಕನೆಕ್ಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಬಳಿಕ ಜಿಸ್ಯಾಟ್ ಕಕ್ಷೆಗೆ ಸೇರಲಿದೆ. ಯುಟೆಲಾಸ್ಟ್ ಮಾಲೀಕತ್ವದ ಕನೆಕ್ಟ್ ಉಪಗ್ರಹವನ್ನು ಥೇಲ್ಸ್ ಅಲೆನಿಯಾ ಸ್ಪೇಸ್ ಅಭಿವೃದ್ಧಿ ಪಡಿಸಿದ್ದು, ಈ ಟೆಲಿಕಾಂ ಉಪಗ್ರಹ ಯುರೋಪ್ ಮತ್ತು ಆಫ್ರಿಕಾದಲ್ಲಿ ಸೇವೆ ನೀಡಲಿದೆ. ಈ ಕಂಪನಿಯ ಸೇವೆ ಪಡೆಯುವ ಗ್ರಾಹಕರು 100 ಎಂಬಿಪಿಎಸ್(ಮೆಗಾ ಬೈಟ್ಸ್ ಪರ್ ಸೆಕೆಂಡ್) ವೇಗದಲ್ಲಿ ಇಂಟರ್‌ನೆಟ್ ಸೌಲಭ್ಯ ಪಡೆಯಲಿದ್ದಾರೆ. ಈ ಉಪಗ್ರಹ 15 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಇಂಟರ್‌ನೆಟ್ ಸೇವೆ ನೀಡಲು ಈ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ. ಏರಿಯನ್-5 ರಾಕೆಟ್ ಒಟ್ಟು 10 ಸಾವಿರ ಕೆಜಿ ತೂಕದ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ.