ಇಸ್ರೋ ಸಾಧನೆ – ಡಾಕಿಂಗ್‌ ಪ್ರಕ್ರಿಯೆ ಹೇಗೆ ನಡೆಯಿತು? ಪ್ರಯೋಜನ ಏನು?

Public TV
3 Min Read
ISRO successfully docks SpaDeX satellites

ನವದೆಹಲಿ: ಹೊಸ ವರ್ಷದ ಆರಂಭದಲ್ಲಿಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಇತಿಹಾಸ ಸೃಷ್ಟಿಸಿದೆ. ಸ್ಪೇಡೆಕ್ಸ್ (SpaDEx)ಮಿಷನ್ ಭಾಗವಾಗಿ ಡಿಸೆಂಬರ್ 30ರಂದು ಭೂಕಕ್ಷೆಗೆ ಕಳಿಸಿದ್ದ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಅಂತರಿಕ್ಷದಲ್ಲಿ ಅನುಸಂಧಾನ ಮಾಡಿದೆ. ಈ ಮೂಲಕ ಡಾಕಿಂಗ್ (Docking) ಘನತೆ ಸಾಧಿಸಿದ ಜಗತ್ತಿನ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ. ಅಮೆರಿಕಾ, ಚೀನಾ, ರಷ್ಯಾ ಸಾಲಿಗೆ ಭಾರತವೂ ಸೇರಿಕೊಂಡಿದೆ.

ಡಿ.30 ರ ರಾತ್ರಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಉಡಾವಣೆಯಾಗಿತ್ತು. ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (PSLV) ರಾಕೆಟ್ ಈ ಪ್ರಯೋಗದ ಭಾಗವಾಗಿದ್ದ ಎಸ್‌ಡಿಎಕ್ಸ್‌01 ಮತ್ತು ಎಸ್‌ಡಿಎಕ್ಸ್02 ಹೆಸರಿನ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತು.

 

ಭೂಮಿಯಿಂದ 475 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್‌ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗ ನಡೆಸಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಪ್ರಯೋಗ ಮುಂದೂಡಿಕೆಯಾಗಿತ್ತು. ತನ್ನ ನಾಲ್ಕನೇ ಪ್ರಯತ್ನದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲಿಗೆ ಎರಡು ಉಪಗ್ರಹಗಳನ್ನು 15 ಮೀಟರ್ ಸನಿಹಕ್ಕೆ ತರಲಾಯಿತು. ನಂತರ ಅಂತರವನ್ನು 3 ಮೀಟರ್‌ಗೆ ಕುಗ್ಗಿಸಲಾಯಿತು. ಅಲ್ಲಿಯೇ ಡಾಕಿಂಗ್ ಪ್ರಕ್ರಿಯೆ ಮೂಲಕ ಎರಡನ್ನು ಯಶಸ್ವಿಯಾಗಿ ಅನುಸಂಧಾನ ಮಾಡಲಾಯಿತು.

ಈ ಐತಿಹಾಸಿಕ ಸಾಧನೆ ಮಾಡಿದ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳು ಸಂಭ್ರಮಿಸಿದರು. ಇದಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶ್ರಮಿಸಿದ ತಜ್ಞರಿಗೆ, ಕೋಟಿ ಕೋಟಿ ಭಾರತೀಯರಿಗೆ ಇಸ್ರೋ ಅಭಿನಂದನೆ ತಿಳಿಸಿತು. ರಾಷ್ಟ್ರಪತಿ, ಮೋದಿ ಸೇರಿ ಗಣ್ಯರು ಇಸ್ರೋ ಸಾಧನೆಯ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಡಾಕಿಂಗ್ ಪ್ರಕ್ರಿಯೆ ಹೇಗೆ ನಡೆಯಿತು?
20 ಕಿ.ಮೀ ಅಂತರದಲ್ಲಿ ಗಂಟೆಗೆ 28 ಸಾವಿರ ಕಿ.ಮೀ ವೇಗದಲ್ಲಿ 2 ಉಪಗ್ರಹಗಳು ಸುತ್ತುತ್ತಿದ್ದವು. ಮೊದಲಿಗೆ `ಟಾರ್ಗೆಟ್’ ವೇಗವನ್ನು ಕುಗ್ಗಿಸಲಾಯಿತು. ಹಂತಹಂತವಾಗಿ `ಚೇಸರ್’ ಸನಿಹಕ್ಕೆ ತರಲಾಯಿತು. `ಚೇಸರ್’ ಕೂಡ ಟಾರ್ಗೆಟ್ ವೇಗಕ್ಕೆ ಅನುಗುಣವಾಗಿ ತನ್ನ ವೇಗವನ್ನು ನಿಯಂತ್ರಿಸಿಕೊಳ್ಳುತ್ತಿತ್ತು.

ಮೊದಲಿಗೆ 1.5ಕಿ.ಮೀ., 500ಮೀ., 15 ಮೀ., 3 ಮೀ., ಹೀಗೆ ಹಂತ ಹಂತವಾಗಿ ಎರಡನ್ನು ಸನಿಹಕ್ಕೆ ತರಲಾಯಿತು. ಅಂತರ 3 ಮೀ. ಇರುವಾಗ ಡಾಕಿಂಗ್ ಪ್ರಕ್ರಿಯೆ ಆರಂಭವಾಯಿತು. ಒಂದರ ಯಾಂತ್ರಿಕ ಹಸ್ತಗಳು ಇನ್ನೊಂದನ್ನು ಹಿಡಿದವು.

ಟಾರ್ಗೆಟ್ ಡಾಕಿಂಗ್ ವ್ಯವಸ್ಥೆ ಪ್ರವೇಶ ಮಾಡಿದ ಚೇಸರ್ ವ್ಯವಸ್ಥೆ ಎರಡೂ ಪೋರ್ಟ್‌ಗಳು ಯಶಸ್ವಿಯಾಗಿ ಅನುಸಂಧಾನಗೊಂಡವು. ಡಾಕಿಂಗ್ ಪ್ರಕಿಯೆ ಮುಗಿದ ಬೆನ್ನಲ್ಲೇ ಒಂದೇ ವ್ಯವಸ್ಥೆಯಾಗಿ 2 ಉಪಗ್ರಹಗಳು ಮಾರ್ಪಟ್ಟವು.

Docking success ISRO successfully docks two satellites in Space under Spadex Mission in fourth attempt 1

ಪ್ರಯೋಜನ ಏನು?
ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಿ, ವಾಪಸ್‌ ಕರೆತರಲು ಇಸ್ರೋ ಈಗಾಗಲೇ ಯೋಜನೆ ರೂಪಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತೆ ಇಸ್ರೋ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ.

ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ತಂತ್ರಜ್ಞಾನ ತಿಳಿದಿರಬೇಕು. ಡಾಕಿಂಗ್ ಪ್ರಕ್ರಿಯೆಯ ಯಶಸ್ಸು ಇದರ ಮೊದಲ ಹೆಜ್ಜೆ ಆಗಿದೆ. ಕಕ್ಷೆಯಲ್ಲಿ ಉಪಗ್ರಹ ರಿಪೇರಿ, ಇಂಧನ ಭರ್ತಿಗೂ ಇದು ಅನುಕೂಲಕರ.

Share This Article