31 ಉಪಗ್ರಹ ಹೊತ್ತ ಪಿಎಸ್‍ಎಲ್‍ವಿ-ಸಿ43 ರಾಕೆಟ್ ಯಶಸ್ವಿ ಉಡಾವಣೆ

Public TV
1 Min Read
ISRO PSLV C43

ಹೈದರಾಬಾದ್: ವಿದೇಶಿ ಸೇರಿದಂತೆ ಒಟ್ಟು 31 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಿಎಸ್‍ಎಲ್‍ವಿ-ಸಿ43 ಮೂಲಕ ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಬೆಳಿಗ್ಗೆ 9.58ಕ್ಕೆ ನಭಕ್ಕೆ ಚಿಮ್ಮಿತು. ಇದರಲ್ಲಿ ಇಸ್ರೋ ಅಭಿವೃದ್ಧಿಪಡಿಸಿರುವ ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ (ಹೈಸಿಸ್) ಉಪಗ್ರಹವು ಉಡ್ಡಯನದ ಪ್ರಧಾನ ಉಪಗ್ರಹವಾಗಿದೆ.

ಉಪಯೋಗವೇನು?:
ಭೂಮಿಯ ಮೇಲ್ಮೈನ ಅಧ್ಯಯನ, ಸಂವಹನ ಸೇವೆ, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ವೈಜ್ಞಾನಿಕ ಸಂಶೋಧನೆ ಸೇರಿ ಮಾಹಿತಿ ಕ್ರಾಂತಿಯನ್ನು ಸೃಷ್ಟಿಸಬಲ್ಲ ಉಪಗ್ರಹಗಳು ಇವಾಗಿವೆ.

ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ (ಹೈಸಿಸ್) ಉಪಗ್ರಹವು 380 ಕೆ.ಜಿ. ತೂಕ ಹೊಂದಿದೆ. ಇದು ಭೂಮಿಯಿಂದ 636 ಕಿ.ಮೀ. ಅಂತರದ ಕಕ್ಷೆಯನ್ನು ಸೇರಲಿದೆ. ಒಟ್ಟು 5 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಉಳಿದ 30 ಉಪಗ್ರಹಗಳು 504 ಕಿ.ಮೀ. ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಇಸ್ರೋ ತಿಳಿಸಿದೆ.

ವಿದೇಶಿ ಉಪಗ್ರಹ ಎಷ್ಟು?:
ಅಮೆರಿಕದ 23 ಉಪಗ್ರಹ ಸೇರಿದಂತೆ ಸ್ಪೇನ್, ಕೆನಡಾ, ಫಿನ್‍ಲ್ಯಾಂಡ್, ಮಲೇಷ್ಯಾ, ಆಸ್ಟ್ರೇಲಿಯಾ, ಕೊಲಂಬಿಯಾ, ನೆದರ್ಲೆಂಡ್ ದೇಶಗಳ ತಲಾ ಒಂದು ಉಪಗ್ರಹ ಇದರಲ್ಲಿ ಸೇರಿವೆ. ಇವುಗಳಲ್ಲಿ ಒಂದು ಮೈಕ್ರೊ ಹಾಗೂ 29 ನ್ಯಾನೋ ಉಪಗ್ರಹಗಳಿವೆ. ಇದೇ ತಿಂಗಳಲ್ಲಿ ಇಸ್ರೋ ನಡೆಸುತ್ತಿರುವ ಎರಡನೇ ಉಡ್ಡಯನ ಇದಾಗಿದೆ. ನವೆಂಬರ್ 14ರಂದು ಜಿಸ್ಯಾಟ್-29 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *