ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಎರಡು ವರ್ಷದ ಹಿಂದಿನ ಕನಸಿನ ಕೂಸು, ದಕ್ಷಿಣ ಏಷ್ಯಾ ಬಾಂಧವ್ಯದ ಪ್ರತೀಕ ‘ಸೌತ್ ಏಷ್ಯಾ ಕಮ್ಯುನಿಕೇಷನ್ ಸ್ಯಾಟಲೈಟ್’ ಆದ ಜಿಸ್ಯಾಟ್-9(ಜಿಯೋಸ್ಟೇಷನರಿ ಕಮ್ಯುನಿಕೇಷನ್ ಸ್ಯಾಟಲೈಟ್) ಇಂದು ನಭಕ್ಕೆ ಚಿಮ್ಮಲಿದೆ.
ಇಂದು ಸಂಜೆ 4.57ಕ್ಕೆ ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಪಗ್ರಹ ಉಡಾವಣೆಯಾಗಲಿದೆ. ಪಾಕಿಸ್ತಾನ ಹೊರತುಪಡಿಸಿ ಸಾರ್ಕ್ ರಾಷ್ಟ್ರಗಳಾದ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಈ ಯೋಜನೆಯ ಭಾಗವಾಗಿವೆ. ಉಪಗ್ರಹ ಉಡಾವಣೆಗೆ 28 ಗಂಟೆಗಳ ಕೌಂಟ್‍ಡೌನ್ ಗುರುವಾರ ರಾತ್ರಿ 12:57 ಗಂಟೆಯಿಂದಲೇ ಶುರುವಾಗಿದೆ ಎಂದು ಇಸ್ರೋ ತಿಳಿಸಿದೆ.
Advertisement
2014ರ ಮೇನಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ, ಮಿತ್ರರಾಷ್ಟ್ರಗಳಿಗೆ ಭಾರತದ ಉಡುಗೊರೆಯಾಗಿ ಸಾರ್ಕ್ ಸ್ಯಾಟಲೈಟ್ ಅಭಿವೃದ್ಧಿಪಡಿಸಲು ಇಸ್ರೋ ವಿಜ್ಞಾನಿಗಳಿಗೆ ಕೇಳಿದ್ದರು. ಈ ಬಗ್ಗೆ ಭಾನುವಾರದ ಮನ್ ಕೀ ಬಾತ್‍ನಲ್ಲಿ ಮಾತನಾಡಿದ್ದ ಮೋದಿ, ಮೇ 5 ರಂದು ಸೌತ್ ಏಷ್ಯಾ ಉಪಗ್ರಹ ಉಡಾವಣೆಯಾಗಲಿದೆ. ಈ ಯೋಜನೆಯಲ್ಲಿ ಭಾಗಿಯಾಗಿರುವ ರಾಷ್ಟ್ರಗಳಿಗೆ ಇದರಿಂದ ಬಹಳಷ್ಟು ಉಪಯೋಗವಾಗಲಿದೆ ಎಂದು ಹೇಳಿದ್ದರು.
Advertisement
ದೂರಸಂಪರ್ಕ, ದೂರಸಂವಹನ, ಡಿಟಿಎಚ್, ವಿಸ್ಯಾಟ್, ದೂರಶಿಕ್ಷಣ ಮತ್ತು ಟೆಲಿ ಮೆಡಿಸಿನ್ ಕ್ಷೇತ್ರದಲ್ಲಿ ಈ ಉಪಗ್ರಹ ನೆರವಿಗೆ ಬರಲಿದೆ. ಅಷ್ಟೇ ಅಲ್ಲ, ಭೂಕಂಪ, ಪ್ರವಾಹ, ಚಂಡಮಾರುತ, ಸುನಾಮಿಗಳು ಹೀಗೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಹಾಟ್‍ಲೈನ್ ಸಂಪರ್ಕದ ಮೂಲಕ ಪರಿಹಾರ ಕಾರ್ಯಾಚರಣೆಗೆ ನೆರವಾಗಲಿದೆ. ಈ ಉಪಗ್ರಹ 12 ವರ್ಷಗಳಿಗೂ ಹೆಚ್ಚು ಕಾರ್ಯಾವಧಿ ಹೊಂದಿದೆ. ಉಪಗ್ರಹ ನಿರ್ಮಾಣಕ್ಕಾಗಿ 235 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ. ಯೋಜನೆಯ ಒಟ್ಟು ವೆಚ್ಚ 450 ಕೋಟಿ ರೂ. 2,230 ಕೆ.ಜಿ ತೂಕವುಳ್ಳ ಈ ಉಪಗ್ರಹವನ್ನು ಜಿಎಸ್‍ಎಲ್‍ವಿ-ಎಫ್‍ಒ9 ರಾಕೆಟ್ ಹೊತ್ತು ಸಾಗಲಿದೆ.
Advertisement
ಮುಂದಿನ ವರ್ಷದ ಆರಂಭದಲ್ಲಿ ಇಸ್ರೋ ಚಂದ್ರಯಾನ-2 ಉಡಾವಣೆ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷರಾದ ಎಎಸ್ ಕಿರಣ್ ಕಿಮಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.