ಟೆಲ್ ಅವಿವ್: ಇಸ್ರೇಲ್ (Israel)-ಹಮಾಸ್ ಕದನ ವಿರಾಮದ (Ceasefire) ಮೊದಲ ಹಂತ ಶನಿವಾರ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಗಾಜಾ ಪಟ್ಟಿಗೆ (Gaza Strip) ಎಲ್ಲಾ ಅಗತ್ಯ ಸರಕುಗಳ ಸರಬರಾಜುಗಳ ಪ್ರವೇಶ ನಿಲ್ಲಿಸುತ್ತಿರುವುದಾಗಿ ಇಸ್ರೇಲ್ ಭಾನುವಾರ ತಿಳಿಸಿದೆ.
ಇಸ್ರೇಲ್ ಹೇಳುವುದನ್ನು ಹಮಾಸ್ ಒಪ್ಪಿಕೊಳ್ಳದಿದ್ದರೆ ಮುಂದಿನ ಪರಿಣಾಮಗಳ ಬಗ್ಗೆ ಎಚ್ಚರಿಸಿದೆ. ಇದರ ನಡುವೆ ಕದನ ವಿರಾಮ ವಿಸ್ತರಣೆಗೆ ಅಮೆರಿಕ ಸೂಚಿಸಿದೆ. ಆದರೆ ಈ ಬಗ್ಗೆ ಇಸ್ರೇಲ್ ಪ್ರಧಾನ ಮಂತ್ರಿ ಕಚೇರಿ ಯಾವುದೇ ಸ್ಪಷ್ಟನೆ ನೀಡಿಲ್ಲ.
ಇಸ್ರೇಲ್-ಹಮಾಸ್ ನಡುವಿನ ಮಾನವೀಯ ನೆರವಿನ ಕದನ ವಿರಾಮದ ಮೊದಲ ಹಂತ ಮುಕ್ತಾಯವಾಗಿದೆ. ಇದರಲ್ಲಿ ಹಮಾಸ್ ಇಸ್ರೇಲ್ ಹಿಂಪಡೆಯುವಿಕೆ ಮತ್ತು ಶಾಶ್ವತ ಕದನ ವಿರಾಮಕ್ಕೆ ಪ್ರತಿಯಾಗಿ ಒತ್ತೆಯಾಳುಗಳ ಬಿಡುಗಡೆಗೆ ಮಾತುಕತೆ ನಡೆಸಿದ್ದವು. ಎರಡನೇ ಹಂತದ ಬಗ್ಗೆ ಎರಡೂ ಕಡೆಯವರು ಇನ್ನೂ ಮಾತುಕತೆ ನಡೆಸಿಲ್ಲ.
ರಂಜಾನ್ ಮತ್ತು ಪಾಸೋವರ್ (ಏ.20) ವರೆಗೆ ಮೊದಲ ಹಂತದ ಕದನ ವಿರಾಮವನ್ನು ವಿಸ್ತರಿಸುವ ಪ್ರಸ್ತಾಪವನ್ನು ಬೆಂಬಲಿಸುವುದಾಗಿ ಇಸ್ರೇಲ್ ಭಾನುವಾರ ತಿಳಿಸಿದೆ. ಟ್ರಂಪ್ ಆಡಳಿತದ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್ ಈ ಪ್ರಸ್ತಾಪವನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.
ಒಂದು ವರ್ಷಕ್ಕೂ ಹೆಚ್ಚು ಕಾಲ ಇಸ್ರೇಲ್ ಮತ್ತು ಹಮಾಸ್ ನಡುವೆ ಮಧ್ಯಸ್ಥಿಕೆ ವಹಿಸುತ್ತಿರುವ ಅಮೆರಿಕ, ಈಜಿಪ್ಟ್ ಅಥವಾ ಕತಾರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಮಾಸ್ ಈ ಪ್ರಸ್ತಾಪಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ.