– ಇನ್ನೂ ಪ್ರಯೋಗ ಮಾಡದ ಅನೇಕ ಸಾಮರ್ಥ್ಯಗಳು ನಮ್ಮ ಬಳಿಯಿದೆ
ಟೆಲ್ ಅವೀವ್: ಹಿಜ್ಬುಲ್ಲಾ ಹೋರಾಟಗಾರರು (Hezbollah fighters) ಇನ್ನು ಮುಂದೆ ಶೌಚಾಲಯಕ್ಕೆ (Toilet) ಹೋಗಲು ಅಥವಾ ಆಹಾರ ಸೇವನೆ ಮಾಡಲು ಹೆದರಬೇಕು ಎಂದು ಇಸ್ರೇಲ್ (Israel) ಚೀಫ್ ಆಫ್ ದಿ ಜನರಲ್ ಸ್ಟಾಫ್ ಹರ್ಜಿ ಹಲೇವಿ ಹೇಳಿದ್ದಾರೆ.
ಲೆಬನಾನ್ ಮತ್ತು ಸಿರಿಯಾದಲ್ಲಿ (Lebanon and Syria) ಸಾವಿರಾರು ಪೇಜರ್‌ಗಳು ಸ್ಫೋಟಗೊಂಡ (Pager Explosion) ಬಳಿಕ ಇಸ್ರೇಲ್ ಕಡೆಯಿಂದ ಈ ಹೇಳಿಕೆ ಬಂದಿದೆ.
ನಮ್ಮಲ್ಲಿ ಇನ್ನೂ ಅನೇಕ ಸಾಮರ್ಥ್ಯಗಳಿವೆ. ನಾವು ಪ್ರತಿ ಹಂತದಲ್ಲೂ ಕಾರ್ಯನಿರ್ವಹಿಸುತ್ತೇವೆ ಮತ್ತು ಪ್ರತಿಯೊಂದರಲ್ಲೂ ಹಿಜ್ಬುಲ್ಲಾ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಹರ್ಜಿ ಹಲೇವಿ ತಿಳಿಸಿದ್ದಾರೆ. ಇದನ್ನೂ ಓದಿ: ಪೇಜರ್ ಆಯ್ತು ಈಗ ಹಿಜ್ಬುಲ್ಲಾ ಘಟಕಗಳಲ್ಲಿ ವಾಕಿಟಾಕಿಗಳ ಸ್ಫೋಟ – 32 ಸಾವು, 3250 ಕ್ಕೂ ಹೆಚ್ಚು ಮಂದಿಗೆ ಗಾಯ
ನಾವು ಇಲ್ಲಿಯವರೆಗೆ ಪ್ರಯೋಗ ಮಾಡದೇ ಇರುವ ಹಲವಾರು ಸಾಮರ್ಥ್ಯಗಳು ನಮ್ಮ ಬಳಿಯಿದೆ. ಅವುಗಳಲ್ಲಿ ಕೆಲವು ನಾವು ಈಗಾಗಲೇ ಪ್ರದರ್ಶಿಸಿದ್ದೇವೆ. ಭವಿಷ್ಯದ ಕಾರ್ಯಾಚರಣೆಗಳಿಗಾಗಿ ನಾವು ಸಕ್ರಿಯವಾಗಿ ತಯಾರಿ ನಡೆಸುತ್ತಿದ್ದೇವೆ. ಪ್ರತಿ ಹಂತದಲ್ಲಿ ಯಾವ ಕಾರ್ಯಾಚರಣೆ ನಡೆಸಬೇಕು ಎನ್ನುವುದನ್ನು ಈಗಾಗಲೇ ಯೋಜಿಸಲಾಗಿದೆ ಮತ್ತು ಸಿದ್ಧವಾಗಿವೆ ಎಂದಿದ್ದಾರೆ.
ಲೆಬನಾನ್ ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ ಸದಸ್ಯರು ಸಂವಹನಕ್ಕೆ ಬಳಸುತ್ತಿದ್ದ ಪೇಜರ್‌ಗಳು ಬುಧವಾರ ಏಕಾಏಕಿ ಸ್ಫೋಟಗೊಂಡಿದ್ದವು. ಗುರುವಾರ ಸಂವಹನಕ್ಕಾಗಿ ಬಳಕೆ ಮಾಡುತ್ತಿದ್ದ ವಾಕಿಟಾಕಿಗಳು ಸ್ಫೋಟಗೊಂಡಿದ್ದವು.
ಈ ಎರಡು ಕೃತ್ಯದ ಹಿಂದೆ ಇಸ್ರೇಲ್ ಭಾಗಿಯಾಗಿದೆ ಎಂದು ಹಿಜ್ಬುಲ್ಲಾ ಹೇಳಿದರೂ ಇಲ್ಲಿಯವರೆಗೆ ಇಸ್ರೇಲ್ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಹಮಾಸ್ ಉಗ್ರರು ಅಕ್ಟೋಬರ್ 7 ರಂದು ಇಸ್ರೇಲ್ ಪ್ರವೇಶಿಸಿ ದಾಳಿ ಮಾಡಿದ್ದರು. ಈ ದಾಳಿಗೆ ಪ್ರತೀಕಾರ ತೆಗೆದುಕೊಂಡ ಇಸ್ರೇಲ್ ಹಮಾಸ್ ಸಂಘಟನೆಯನ್ನೇ ಸಂಪೂರ್ಣ ನಾಶ ಮಾಡುವುದಾಗಿ ಘೋಷಿಸಿದೆ. ವಿದೇಶದಲ್ಲಿರುವ ಹಮಾಸ್ ನಾಯಕರು ಮತ್ತು ಹಮಾಸ್‌ಗೆ ಬೆಂಬಲ ನೀಡುವ ಎಲ್ಲಾ ಸಂಘಟನೆಗಳನ್ನು ಹೊಡೆದು ಹಾಕುತ್ತೇವೆ ಎಂದು ಇಸ್ರೇಲ್ ತಿಳಿಸಿದೆ.