ಟೆಲ್‌ಅವಿವ್: ಅ.10 ರಂದು ಘೋಷಣೆ ಬಳಿಕ ಈಗ ಮತ್ತೆ ಇಸ್ರೇಲ್ (Israel) ಗಾಜಾದ (Gaza) ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ (Airstrike) ನಡೆಸಿದೆ. ದಾಳಿಯಲ್ಲಿ ಕನಿಷ್ಠ 24 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿಸಿದ್ದು, ಹಲವರು ಗಾಯಗೊಂಡಿದ್ದಾರೆ.
ಎರಡು ವರ್ಷಗಳ ಯುದ್ಧದ ನಂತರ ಅಕ್ಟೋಬರ್ 10 ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆಯಾಗಿತ್ತು. ಇದಾದ ಬಳಿಕ ಶನಿವಾರ (ನ.23) ಈ ದಾಳಿ ನಡೆದಿದೆ. ದಕ್ಷಿಣ ಗಾಜಾದಲ್ಲಿ ಇಸ್ರೇಲಿ ಸೈನಿಕರ ಮೇಲೆ ಹಮಾಸ್ ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಕದನ ವಿರಾಮ ಜಾರಿಗೆ ಬಂದಾಗಿನಿಂದ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 312 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಈ ಮೂಲಕ ಇಸ್ರೇಲ್ ಹಮಾಸ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಹಮಾಸ್ ಆಡಳಿತದ ಆರೋಗ್ಯ ಸಚಿವಾಲಯ ಆರೋಪಿಸಿದೆ. ಅಲ್ಲದೇ ಈ ಹತ್ಯಾಕಾಂಡವನ್ನು ನಿಲ್ಲಿಸಲು ಇಸ್ರೇಲ್ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವಂತೆ ಕರೆಕೊಟ್ಟಿದೆ.
ಅ.13 ರಂದು ಗಾಜಾದಲ್ಲಿ ಯುದ್ಧ ಅಂತ್ಯಗೊಂಡಿದ್ದು (Gaza War Is Over), ಮಧ್ಯಪ್ರಾಚ್ಯದಲ್ಲಿ ಈಗ ಶಾಂತಿ ನೆಲೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದರು.
ಹಮಾಸ್ ಒತ್ತೆಯಾಳುಗಳ ಬಿಡುಗಡೆಗೂ (Hamas Hostage Release) ಮುನ್ನ ಪಶ್ಚಿಮ ಏಷ್ಯಾಕ್ಕೆ ಟ್ರಂಪ್ ತೆರಳಿದ್ದರು. ಇದಕ್ಕೂ ಮುನ್ನ ಏರ್ ಫೋರ್ಸ್ ಒನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಗಿದಿದೆ. ಈ ಯುದ್ಧ ನಿಲ್ಲಿಸಿದ್ದರಿಂದ ಯಹೂದಿಗಳು, ಮುಸ್ಲಿಮರು ಅಥವಾ ಅರಬ್ ದೇಶಗಳಾಗಿರಬಹುದು ಎಲ್ಲರೂ ಸಂತೋಷವಾಗಿದ್ದಾರೆ ಎಂದು ಹೇಳಿದ್ದರು.
