ಕೋಲ್ಕತ್ತಾ: ನಾನು ಅಂತರ್ಗತ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವನರನ್ನು ಇಸ್ಕಾನ್‍ನ ‘ಸಾಮಾಜಿಕ ಸಾಮರಸ್ಯ’ ಕುರಿತ ರಥಯಾತ್ರೆಗೆ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ.
ಇಸ್ಕಾನ್‍ನ ಆಹ್ವಾನವನ್ನು ನುಸ್ರತ್ ಜಹಾನ್ ಅವರು ಖುಷಿಯಿಂದಲೇ ಸ್ವಾಗತಿಸಿದ್ದು, ಇಸ್ಕಾನ್ ವಕ್ತಾರ ರಾಧಾರಮಣ್ ದಾಸ್ ಅವರು ಆಹ್ವಾನ ಸ್ವೀಕರಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಂತರ್ಗತ ಭಾರತದ ಹೊಸ ಕಲ್ಪನೆಯನ್ನು ನೀಡುವ ಮೂಲಕ ಭವಿಷ್ಯದ ದಾರಿಯನ್ನು ತೋರಿಸಿದ್ದಾರೆ ಎಂದು ರಾಧಾರಮಣ ದಾಸ್ ತಿಳಿಸಿದ್ದಾರೆ.
Advertisement
Thank You @iskconkolkata for the invite. It would be my pleasure to be associated with this inclusive event. https://t.co/GyzY03JyHA
— Nussrat Jahan (@nusratchirps) July 2, 2019
Advertisement
ಇದು ಇಂಟರ್‍ನ್ಯಾಷನಲ್ ಸೊಸೈಟಿ ಆಫ್ ಕೃಷ್ಣ ಕಾನ್ಸಿಯಸ್‍ನೆಸ್(ಇಸ್ಕಾನ್)ನ 48ನೇ ರಥಯಾತ್ರೆಯಾಗಿದ್ದು, 1971ರಿಂದಲೂ ಈ ರಥಯಾತ್ರೆ ನಡೆಯುತ್ತಿದೆ. ಕಾರ್ಯಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಉದ್ಘಾಟಿಸುತ್ತಿದ್ದಾರೆ.
Advertisement
ನುಸ್ರತ್ ಜಹಾನ್ ಅವರು ಕೋಲ್ಕತ್ತಾ ಮೂಲದ ಉದ್ಯಮಿಯನ್ನು ಮದುವೆಯಾಗಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬುರ್ಖಾ ಧರಿಸದಿರುವುದು, ಮಂಗಳ ಸೂತ್ರ ಕಟ್ಟಿರುವುದು ಹಾಗೂ ಸಿಂಧೂರ ಇಟ್ಟಿದ್ದಕ್ಕೆ ಮುಸ್ಲಿಂ ಗುರುಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಮುಸ್ಲಿಂ ನಾಯಕರು ಆಕ್ರೋಶ ಹೊರಹಾಕಿದ್ದರು.
Advertisement
ಟೀಕೆಗಳಿಗೆ ಉತ್ತರಿಸಿದ್ದ ಸಂಸದೆ ನುಸ್ರತ್ ಜಹಾನ್, ನಾನು ಅಂತರ್ಗತ ಭಾರತವನ್ನು ಪಾಲಿಸುತ್ತೇನೆ, ಯಾವುದೇ ಜಾತಿ, ಪಂಥ, ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಉತ್ತರಿಸಿದ್ದರು. ಇದೀಗ ಸಂಸದೆ ನುಸ್ರತ್ ಅವರು ತಮ್ಮ ಪತಿ ಹಾಗೂ ಇತರ ನಟ, ನಟಿಯರೊಂದಿಗೆ ಇಸ್ಕಾನ್‍ನ ರಥಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ನುಸ್ರತ್ ಜಹಾನ್ ಅವರು ಹೊಸ ಭಾರತವನ್ನು ಪ್ರತಿನಿಧಿಸುತ್ತಾರೆ, ನಾವೆಲ್ಲರೂ ಅಂತರ್ಗತ ಭಾರತದಲ್ಲಿ ನಂಬಿಕೆ ಇಟ್ಟವರು. ಇತರ ಧರ್ಮಗಳ ನಂಬಿಕೆಗಳನ್ನು ಗೌರವಿಸಬೇಕು. ಅವರ ಹಬ್ಬಗಳಲ್ಲಿ ಭಾಗವಹಿಸುವ ಮೂಲಕ ಭಾರತವನ್ನು ಮತ್ತೆ ಬೆಳಗುವಂತೆ ಮಾಡಬೇಕು. ಇದು ಭಾರತದ ನಿಲುವಾಗಿದೆ, ಈ ನಿಟ್ಟಿನಲ್ಲಿ ನುಸ್ರತ್ ಅವರು ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ರಾಧಾರಮಣ ದಾಸ್ ತಿಳಿಸಿದ್ದಾರೆ.
ಎಲ್ಲರಿಗೂ ಅವರ ಆಯ್ಕೆಯನ್ನು ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಸಮಾಜ ನೀಡಿದೆ, ಈ ಮೂಲಕ ನವು ಸಂತೋಷಕರವಾದ ಸಮಾಜವನ್ನು ನಿರ್ಮಿಸಬೇಕು. ಹೀಗಾಗಿಯೇ ದೇವರು ಎಲ್ಲರಿಗೂ ಸ್ವಾತಂತ್ರ ನೀಡಿದ್ದಾನೆ. ಈ ಸ್ವಾತಂತ್ರ್ಯವನ್ನು ನಾವು ಯಾರಿಂದಲೂ ಕಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ.
ನುಸ್ರತ್ ಜಹಾನ್ ವಿವಾದ: ಬುರ್ಖಾ ಧರಿಸದೆ ಸಂಸತ್ ಪ್ರವೇಶಿಸಿರುವುದು, ಸಿಂಧೂರ ಇಟ್ಟಿರುವುದು ಹಾಗೂ ಕೈಗೆ ಬಳೆ ತೊಟ್ಟಿದ್ದಕ್ಕೆ ಸಂಸದೆ ನುಸ್ರತ್ ಅವರನ್ನು ಮುಸ್ಲಿಂ ಧರ್ಮ ಗುರುಗಳು ಸೇರಿದಂತೆ ಹಲವರು ಟೀಕಿಸಿದ್ದರು. ಇದಕ್ಕೆ ಉತ್ತರಿಸಿದ್ದ ಸಂಸದೆ, ನಾನು `ಅಂತರ್ಗತ ಭಾರತ’ವನ್ನು ಪ್ರತಿನಿಧಿಸುತ್ತೇನೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದರು.
ನಾನು ಜಾತಿ, ಮತ, ಧರ್ಮಗಳ ಹಂಗು ಮೀರಿದ `ಅಂತರ್ಗತ ಭಾರತ’ವನ್ನು ಪ್ರತಿನಿಧಿಸುತ್ತೇನೆ. ಅಲ್ಲದೆ ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಸಂಸತ್‍ನಲ್ಲಿ ಉತ್ತರಿಸಿದ್ದರು. ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೂ ಸಹ ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ನಾನು ಇನ್ನೂ ಮುಸ್ಲಿಂ ಧರ್ಮದಲ್ಲಿದ್ದೇನೆ. ಆದರೆ ನಾನು ಧರಿಸುವ ಉಡುಪಿನ ಕುರಿತು ಟೀಕಿಸುವ ಹಕ್ಕು ಯಾರಿಗೂ ಇಲ್ಲ. ನಂಬಿಕೆ ಉಡುಪುಗಳನ್ನು ಮೀರಿದ ವಿಷಯ. ಎಲ್ಲ ಧರ್ಮಗಳ ಅಮೂಲ್ಯವಾದ ಸಿದ್ಧಾಂತಗಳಲ್ಲಿ ನಂಬಿಕೆ ಇಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂದು ಜಹಾನ್ ಟೀಕಾಕಾರರನ್ನು ಕುಟುಕಿದ್ದರು.