– ಸಿಗ್ನಲ್ ಆ್ಯಪ್‌ನಲ್ಲಿ ಸಂವಹನ, ಪಾಕ್ ಉಗ್ರರೊಂದಿಗೆ ನಿರಂತರ ಸಂಪರ್ಕ
– ಇಸ್ಲಾಂ ರಾಜ್ಯ ಸ್ಥಾಪನೆಗೆ ಹೊಂಚು ಹಾಕಿದ್ದ ಜಾಲ; ಐವರು ಅರೆಸ್ಟ್
ನವದೆಹಲಿ: ವಿವಿಧ ರಾಜ್ಯಗಳಲ್ಲಿ ಸಿಕ್ಕಿಬಿದ್ದಿದ್ದ ಐವರು ಐಸಿಸ್ ಉಗ್ರರ ಗ್ಯಾಂಗ್‌ನ (ISIS Terrorists) ಬಗ್ಗೆ ರಣರೋಚಕ ರಹಸ್ಯಗಳು ಬಯಲಾಗಿವೆ. ʻಖಿಲಾಫತ್ʼ (Muslims States) ಮಾಡಲು ಹೊಂಚುಹಾಕಿದ್ದ ಗ್ಯಾಂಗ್ ಬಲಪಂಥೀಯ ನಾಯಕರನ್ನೇ (Right Wing Leaders) ಟಾರ್ಗೆಟ್ ಮಾಡಿಕೊಂಡಿತ್ತು ಎಂದು ತಿಳಿದುಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಚಾಟಿಂಗ್ ನಡೆಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದ ಈ ಗ್ಯಾಂಗ್ ಪಾಕ್‌ನಿಂದ (Pakistan) ನಿರ್ವಹಿಸಲ್ಪಡುತ್ತಿತ್ತು. ಗುಂಪಿನಲ್ಲಿ 40 ಸದಸ್ಯರು ಇದ್ದರೂ ಕೇವಲ ಐವರಿಗೆ ಮಾತ್ರ ಉಗ್ರ ಚಟುವಟಿಕೆಗಳ ಬಗ್ಗೆ ತಿಳಿದಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದ ಶಂಕಿತರು ಬಲಪಂಥೀಯ ನಾಯಕರನ್ನೇ ಗುರಿಯಾಗಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಕುರಿತು ಸಿಗ್ನಲ್ ಆಪ್‌ನಲ್ಲಿ ಪಾಕ್ ಮೂಲದವರೊಂದಿಗೆ ನಡೆಸಿದ ಚಾಟ್‌ಗಳು ಲಭ್ಯವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಲ್ಲದೇ ಶಂಕಿತ ಉಗ್ರರ ಗ್ಯಾಂಗ್ ನಿರಂತರವಾಗಿ ಪಾಕ್ ಮೂಲದವರ ಜೊತೆಗೆ ಸಂಪರ್ಕದಲ್ಲಿರುತ್ತಿತ್ತು. ಸಿಗ್ನಲ್ ಆಪ್ (Signal App) ಮೂಲಕ ಮುಂದಿನ ಚಟುವಟಿಕೆಗಳ ಬಗ್ಗೆ ಸಂವಹನ ನಡೆಸುತ್ತಿತ್ತು. ಜೊತೆಗೆ ಭಾರತದಲ್ಲಿ ಎಲ್ಲೆಲ್ಲಿ ಕೆಮಿಕಲ್ ಬಾಂಬ್ ಸ್ಫೋಟಿಸಬೇಕು ಅನ್ನೋ ಬಗ್ಗೆಯೂ ಚರ್ಚಿಸಿದ್ದರು. ಆತ್ಮಹತ್ಯಾ ಬಾಂಬರ್‌ಗಳನ್ನು ಸಿದ್ಧಪಡಿಸಿದ್ದರು ಅನ್ನೋದು ವರದಿಗಳಿಂದ ತಿಳಿದುಬಂದಿದೆ.
ಐವರು ಅರೆಸ್ಟ್
ದೆಹಲಿ (Delhi), ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತೆಲಂಗಾಣದಲ್ಲಿ ನೆಲೆಸಿದ್ದ ಐವರು ಶಂಕಿತ ಉಗ್ರರನ್ನ ಕಳೆದ ಎರಡು ದಿನಗಳಲ್ಲಿ ಬಂಧಿಸಲಾಗಿದೆ. ಮುಂಬೈ ನಿವಾಸಿ ಅಫ್ತಾಬ್, ಅಬು ಸುಫಿಯಾನ್ ಇಬ್ಬರನ್ನ ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ, ಆಶರ್ ದಾನಿಶ್ ರಾಂಚಿಯಲ್ಲಿ, ಕಮ್ರಾನ್ ಖುರೇಷಿಯನ್ನ ಮಧ್ಯಪ್ರದೇಶದ ರಾಜ್‌ಗಢದಲ್ಲಿ ಮತ್ತು ಹುಜೈಫ್ ಯೆಮೆನ್‌ನ ತೆಲಂಗಾಣದಲ್ಲಿ ಬಂಧಿಸಲಾಗಿದೆ.
ಬಾಂಬ್ ಎಕ್ಸ್‌ಪರ್ಸ್ ಪದವೀಧರ ಆಶರ್ ದಾನಿಶ್
ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರನಾಗಿರುವ ಡ್ಯಾನಿಶ್ ಈ ಐವರ ಗುಂಪಿನ ನಾಯಕನಾಗಿದ್ದ. ʻಗಜ್ವಾʼ ಎಂಬ ಕೋಡ್ ನೊಂದಿಗೆ ಭಾರತದಲ್ಲಿ ಕೆಲಸ ಮಾಡುತ್ತಿದ್ದ. ಈ ವರ್ಷ ಜನವರಿಯಲ್ಲಿ ಭಾರತಕ್ಕೆ ಬಂದಿದ್ದ. ಬಾಂಬ್ ತಯಾರಿಸುವುದರಲ್ಲಿ ಎಕ್ಸ್‌ಪರ್ಟ್ ಆಗಿದ್ದ ಎಂದು ವರದಿಗಳು ತಿಳಿಸಿವೆ. ತನ್ನ ಅಸಲಿ ವೇಷ ಬದಲಿಸಿ ವಿದ್ಯಾರ್ಥಿಯಂತೆ ಗುರುತಿಸಿಕೊಂಡಿದ್ದ. ಈತ ರಾಂಚಿಯ ತಬಾರಕ್ ಲಾಡ್ಜ್‌ನಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ.
ಭಾರೀ ಪ್ರಮಾಣದ ಕೆಮಿಕಲ್ ಪತ್ತೆ
ಬಂಧಿತ ಆರೋಪಿಗಳಿಂದ ಒಂದು ಪಿಸ್ತೂಲ್, ಡಿಜಿಟಲ್ ಸಾಧನಗಳು, ಭಾರೀ ಪ್ರಮಾಣದ ಕೆಮಿಕಲ್ ವೆಪೆನ್, ವೆಪೆನ್ ಕಾರ್ಟ್ರಿಡ್ಜ್ ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಿದ ಕೆಮಿಕಲ್‌ಗಳ ಪೈಕಿ ಹೈಡ್ರೋಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಸೋಡಿಯಂ ಬೈಕಾರ್ಬನೇಟ್, ಸಲ್ಫರ್ ಪೌಡರ್, pH ಮೌಲ್ಯ ಪರೀಕ್ಷಕ ಮತ್ತು ಬಾಲ್ ಬೇರಿಂಗ್‌ಗಳು ಸೇರಿವೆ. ಅಲ್ಲದೇ ಲ್ಯಾಪ್ ಟಾಪ್, ಮೊಬೈಲ್ ಫೋನ್, ಡಿಜಿಟಲ್ ತಕ್ಕಡಿ, ಬೀಕರ್ ಸೆಟ್, ಗ್ಲೌಸ್, ಆಕ್ಸಿಜನ್ ಮಾಸ್ಕ್, ಮದರ್‌ಬೋರ್ಡ್ ಹೊಂದಿರುವ ಪ್ಲಾಸ್ಟಿಕ್ ಕಂಟೇನರ್ ವಶಪಡಿಸಿಕೊಳ್ಳಲಾಗಿದೆ. ಡ್ಯಾನಿಶ್ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವಲ್ಲಿ ಪರಿಣಿತನಾಗಿದ್ದ ಎಂದು ತಿಳಿದುಬಂದಿದೆ.