ಬೀದರ್: ಗುಜರಾತ್‍ನ ಶಾಸಕರುಗಳನ್ನು ಕುದುರೆ ವ್ಯಾಪರ ಮಾಡಲು ಬಿಡದಿದಕ್ಕೆ ಇದೀಗ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಇಡಿ ಅಧಿಕಾರಿಗಳು ಕಣ್ಣೀರು ಹಾಕಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇಡು, ದ್ವೇಷ ರಾಜಕಾರಣದಿಂದ ಡಿ.ಕೆ.ಶಿವಕುಮಾರ್ ಅವರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಯಾವ ರೀತಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆ ಚಿತ್ರಣವನ್ನು ನೋಡಿದರೆ ಶಾಕ್ ಆಗುತ್ತಿದೆ. ಹಬ್ಬದ ದಿನ ಸಂಭ್ರಮದಿಂದ ಇರಬೇಕು. ಹಬ್ಬ, ಸಂಪ್ರದಾಯ, ಪೂರ್ವಿಕರ ಕಾರ್ಯಕ್ಕೆ ಅವಕಾಶ ನೀಡದೆ ಕಿರುಕುಳ ನೀಡುವುದು ಯಾವ ರೀತಿಯ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಇದು ಅತ್ಯಂತ ಖಂಡನೀಯ, ಬಿಜೆಪಿ ಸರ್ಕಾರ ಮಾನವೀಯತೆಯನ್ನು ಮರೆತು ಸೇಡಿನ ರಾಜಕೀಯ ಮಾಡುತ್ತಿದೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಜೊತೆ ಕಾಂಗ್ರೆಸ್ ಪಕ್ಷ ಇದೆ, ಸತ್ಯಕ್ಕೆ ಜಯ ಸಿಗುತ್ತದೆ ಎಂದು ಈಶ್ವರ್ ಖಂಡ್ರೆ ಭರವಸೆ ವ್ಯಕ್ತಪಡಿಸಿದರು.
Advertisement
ಮೂರನೇ ದಿನವಾದ ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ ಮುನ್ನ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಣ್ಣೀರು ಹಾಕಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕಣ್ಣಲ್ಲಿ ನೀರು ಹಾಕುತ್ತಿರೋದು ನಮ್ಮ ತಂದೆಗೆ ಪೂಜೆ ಮಾಡುವ ಅವಕಾಶವನ್ನು ನನ್ನ ಬಿಜೆಪಿ ಸ್ನೇಹಿತರು ಅಧಿಕಾರದ ಮುಖಾಂತರ ಕೊಟ್ಟಿಲ್ಲ. ನನಗೆ ದುಃಖ ಯಾಕೆ ಆಗುತ್ತಿದೆ ಎಂದರೆ ಇವತ್ತು ತಂದೆ ಹಾಗೂ ಹಿರಿಯರಿಗೆ ನಾನು, ನನ್ನ ತಮ್ಮ ಪೂಜೆ ಮಾಡಬೇಕಿತ್ತು. ಅವರಿಗೆ ಎಡೆ ಇಡಲು ಸಹ ಅವಕಾಶ ಕೊಟ್ಟಿಲ್ಲ. ಪರವಾಗಿಲ್ಲ, ಇಡಿ ಕಚೇರಿಯಲ್ಲೇ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುತ್ತೇನೆ ಎಂದು ಡಿಕೆಶಿ ಕಣ್ಣೀರಿಟ್ಟಿದ್ದಾರೆ.
Advertisement
ಉಪ್ಪು ತಿಂದವರು ನೀರು ಕುಡಿಬೇಕು ಎಂದು ನನ್ನ ಸ್ನೇಹಿತರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೋಸ್ಕರ, ನಮ್ಮ ನಾಯಕರಿಗೋಸ್ಕರ, ನನ್ನನ್ನು ನಂಬಿದ ಜನಕ್ಕೋಸ್ಕರ ಹೋರಾಟ ಮಾಡಿಕೊಂಡು ನಾನು ಬಂದಿದ್ದೇನೆ. ಇಂದು ನಮ್ಮ ಅನೇಕ ಸ್ನೇಹಿತರು, ಕಾರ್ಯಕರ್ತರು, ನಾಯಕರು ಪಕ್ಷ ಬೆಳೆಸಿರುವುದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ಇದನ್ನೆಲ್ಲಾ ಎದುರಿಸುವಂತಹ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ನಾನು ಯಾರಿಗೂ ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ, ಲಂಚದ ಆರೋಪವಿಲ್ಲ, ಅಧಿಕಾರ, ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿಲ್ಲ. ನೇರವಾಗಿ ನುಡಿದಂತೆ ನಡೆದಿದ್ದೇನೆ ಎಂದು ತಿಳಿಸಿದ್ದಾರೆ.