ತೆರಿಗೆಯ ಅಸ್ತ್ರವನ್ನೇ ಮುಂದಿಟ್ಟುಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನಲ್ಲೊಂದು ವ್ಯಾಪಾರ ಯುದ್ಧವನ್ನೇ ಆರಂಭಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಗ್ರೀನ್‌ಲ್ಯಾಂಡ್ ಖರೀದಿ ಮಾಡುವುದಾಗಿ ಹೇಳಿದ್ದ ಟ್ರಂಪ್, ಪನಾಮ ಕಾಲುವೆಯನ್ನು ತನ್ನ ಸುಪರ್ದಿಗೆ ಪಡೆಯುವ ಮಾತುಗಳನ್ನೂ ಆಡಿದ್ದರು. ಇದೀಗ ಯುದ್ಧ ಭೂಮಿಯಾದ ಗಾಜಾ ಮೇಲೆ ಟ್ರಂಪ್ ಕಣ್ಣಿಟ್ಟಿರುವುದು ಇಡೀ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿದೆ. ಟ್ರಂಪ್ ಈ ನಿರ್ಧಾರಕ್ಕೆ ಕಾರಣವೇನು? ಟ್ರಂಪ್ ಹೇಳಿದ್ದೇಕೆ? ಗಾಜಾ ಪಟ್ಟಿ ನಿಯಂತ್ರಣದಿಂದ ಅಮೆರಿಕಕ್ಕೆ ಏನು ಲಾಭ ಎಂಬುದನ್ನು ತಿಳಿಯೋಣ.. ಅದಕ್ಕೂ ಮುನ್ನ ಗಾಜಾಪಟ್ಟಿಯ ಕರಾಳ ಇತಿಹಾಸವನ್ನರಿಯೋಣ…
Advertisement
ಗಾಜಾ ಪಟ್ಟಿಯ ಇತಿಹಾಸ ನಿಮಗೆ ಗೊತ್ತೇ?
ಪ್ಯಾಲೆಸ್ತೀನ್ ನೈರುತ್ಯ ಭಾಗದಲ್ಲಿರುವ ಗಾಜಾ ಪಟ್ಟಿಯು ಸಂಘರ್ಷದ ಭೂಮಿ ಎಂದೇ ಹೆಸರುವಾಸಿ. ರೋಮನ್ನರು ಸೇರಿದಂತೆ ವಿಶ್ವದ ಇತರ ಪ್ರಮುಖ ಶಕ್ತಿಗಳು ಗಾಜಾ ಪಟ್ಟಿಯನ್ನ ಆಳಿದ್ದವು. ಅದರಲ್ಲೂ 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಯುದ್ಧ ಶುರುವಾದ ಬಳಿಕ ಇದು ಅಕ್ಷರಶಃ ಯುದ್ಧ ಭೂಮಿಯಾಗಿ ಮಾರ್ಪಟ್ಟಿತು. ಇದೀಗ ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ ಏರ್ಪಟ್ಟಿದೆ. ಈ ನಡುವೆ ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ಟ್ರಂಪ್ ಈ ಯುದ್ಧ ಭೂಮಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ.
Advertisement
Advertisement
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಗಾಜಾ ಪಟ್ಟಿಯನ್ನು ಮೊದಲು ಅಶ್ಯೂರ್ ಎಂಬ ಸಾಮ್ರಾಜ್ಯ ಆಳುತ್ತಿತ್ತು. ನಂತರ ಗಾಜಾದಲ್ಲಿ ರೋಮನ್ನರ ಪ್ರಾಬಲ್ಯ ಸ್ಥಾಪನೆಯಾಯ್ತು. ಕ್ರಿ.ಪೂ. 1ನೇ ಶತಮಾನದಲ್ಲಿ ರೋಮನ್ನರ ಸಾಮ್ರಾಜ್ಯವು ಗಾಜಾವನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಬಳಿಕ ಈ ಪ್ರದೇಶದ ಮಹತ್ವ ಅರಿತು ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡಲು ಶುರು ಮಾಡಿದರು. ಏಷ್ಯಾ, ಯುರೋಪ್, ಆಫ್ರಿಕಾ ನಡುವಿನ ವ್ಯಾಪಾರ ಮಾರ್ಗಗಳು ಇದರ ಮೂಲಕವೇ ಹಾದುಹೋಗುತ್ತಿದ್ದರಿಂದ ಪ್ರಮುಖ ವ್ಯಾಪಾರ ಕೇಂದ್ರವಾಗಿಯೇ ಮಾರ್ಪಟ್ಟಿತ್ತು. ರೋಮನ್ನರ ಆಳ್ವಿಕೆ ಗಾಜಾದಲ್ಲಿ ಮಹತ್ವದ ಬದಲಾವಣೆಯನ್ನೇ ತಂದಿತು. ಆದ್ರೆ ರೋಮನ್ನರ ಆಳ್ವಿಕೆಯ ಕೊನೆ ಕೊನೆಯಲ್ಲಿ ಗಾಜಾ ಪಟ್ಟಿಯಲ್ಲಿ ಹಲವಾರು ದಂಗೆಗಳು ಮತ್ತು ಸಂಘರ್ಷಗಳು ಏರ್ಪಟ್ಟವು. ರೋಮ್ ಸಾಮ್ರಾಜ್ಯದ ಪತನದ ನಂತರ ಗಾಜಾ ಮುಸ್ಲಿಂ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತು. ಕ್ರಿ.ಶ. 7ನೇ ಶತಮಾನದಲ್ಲಿ ಅರಬ್ಬರು ಗಾಜಾವನ್ನು ವಶಕ್ಕೆ ಪಡೆದುಕೊಂಡು ಸಂಪೂರ್ಣ ಇಸ್ಲಾಮಿಕ್ ಸಾಮ್ರಾಜ್ಯದ ಭಾಗವಾಗಿ ಪರಿವರ್ತಿಸಿದರು. ಇದನ್ನ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದ್ರು, ಇದರ ಹೊರತಾಗಿಯೂ ಯುದ್ಧ, ಸಂಘರ್ಷಗಳು ಮುಂದುವರಿಯಿತು.
Advertisement
ಇನ್ನೂ 20ನೇ ಶತಮಾನದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಪ್ರಾಬಲ್ಯಕ್ಕೆ ಗಾಜಾಪಟ್ಟಿ ಒಳಪಟ್ಟಿತು. ಆದ್ರೆ ಬ್ರಿಟಿಷ್ ಆಳ್ವಿಕೆಯು ಪ್ಯಾಲೆಸ್ತೀನ್‌ನಲ್ಲಿ ಯಹೂದಿ ಮತ್ತು ಅರಬ್ ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಿಸಿತು. ಈ ಸಂದರ್ಭದಲ್ಲಿ ಲಕ್ಷಾಂತರ ಜನ ವಲಸೆ ಹೋದರು. ಹಲವು ಸಂಘರ್ಷ ಚಳವಳಿಗಳು ಹುಟ್ಟಿಕೊಂಡುವು ಪ್ರಮುಖವಾಗಿ ಪ್ಯಾಲೆಸ್ತೀನ್ ಸ್ವಾತಂತ್ರ್ಯ ಸಂಗ್ರಾಮ ಅಂದು ಹುಟ್ಟಿಕೊಟ್ಟ ಸಂಗ್ರಾಮ ಇಂದಿಗೂ ಮುಂದುವರಿಯುತ್ತಲೇ ಇದೆ.
ಗಾಜಾ ಇಸ್ರೇಲ್ ಆಡಳಿತಕ್ಕೆ ಒಳಪಟ್ಟಿದ್ದು ಯಾವಾಗ?
ಕಳೆದ ದಶಕಗಳಿಂದಲೂ ಗಾಜಾ ಪಟ್ಟಿ ಸಂಘರ್ಷ ಮತ್ತು ಹಿಂಸಾಚಾರದ ಕೇಂದ್ರವಾಗಿಯೇ ಉಳಿದಿದೆ. 1948ರಲ್ಲಿ ಇಸ್ರೇಲ್ ರಚನೆಯೊಂದಿಗೆ ಭೌಗೋಳಿಕ ಪ್ರಾಮುಖ್ಯತೆ ಹೆಚ್ಚಾಯಿತು. 1948ರಲ್ಲಿ ಇಸ್ರೇಲ್ ಪೂರ್ಣ ಪ್ರಮಾಣದಲ್ಲಿ ರಚನೆಯಾದಾಗ ಆ ಪ್ರದೇಶದಲ್ಲಿ ಅರಬ್ ಮತ್ತು ಯಹೂದಿ ಸಮುದಾಯಗಳನ್ನು ಪ್ರತ್ಯೇಕಿಸಲು ಕದನವಿರಾಮ ರೇಖೆ ಎಳೆಯಲಾಯಿತು. ಇದರ ಅಡಿಯಲ್ಲಿ, ಗಾಜಾ ಪಟ್ಟಿಯನ್ನು ಅರಬ್ ಬಹುಸಂಖ್ಯಾತ ಪ್ರದೇಶವಾಗಿ ಸ್ಥಾಪಿಸಲಾಯಿತು. ಆದರೆ ಯಹೂದಿ ಸಮುದಾಯವು ಇಸ್ರೇಲ್‌ನಲ್ಲಿ ಉಳಿಯಿತು. ೧೯೪೮ ರಿಂದ ೧೯೬೭ರ ವರೆಗೆ ಈಜಿಪ್ಟ್ ಈ ಪ್ರದೇಶವನ್ನು ನಿಯಂತ್ರಿಸಿತು. ಆದರೆ ೧೯೬೭ರಲ್ಲಿ ನಡೆದ 6 ದಿನಗಳ ಯುದ್ಧದಲ್ಲಿ ಇಸ್ರೇಲ್ ಈಜಿಪ್ಟ್ ಅನ್ನು ಸೋಲಿಸಿ ಗಾಜಾ ಪಟ್ಟಿಯನ್ನು ವಶಪಡಿಸಿಕೊಂಡಿತು. ಅಂದಿನಿಂದ ಈ ಪ್ರದೇಶವು ಇಸ್ರೇಲ್ ಆಡಳಿತಕ್ಕೆ ಒಳಪಟ್ಟಿತು.
2005 ರಲ್ಲಿ, ಪ್ಯಾಲೆಸ್ತೀನಿಯನ್ ಸ್ವಾತಂತ್ರ್ಯ ಸಂಸ್ಥೆ ಜೊತೆಗಿನ ಒಪ್ಪಂದದ ಭಾಗವಾಗಿ, ಇಸ್ರೇಲ್ ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆಯಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿತು ಮತ್ತು ಯಹೂದಿ ವಸಾಹತುಗಳನ್ನು ಕೆಡವಿತು. ಆದರೆ 2007 ರಲ್ಲಿ ಹಮಾಸ್ ಈ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಇದು ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಯಿತು.
ಟ್ರಂಪ್ ಗೇಮ್ ಪ್ಲ್ಯಾನ್ ಏನು?
ಇತ್ತೀಚೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾದ ನಂತರ ಟ್ರಂಪ್ ಗಾಜಾ ಪಟ್ಟಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ನಿಯಂತ್ರಣ ಮಾಡುವುದಾಗಿ ಹೇಳಿದರು. ಅಲ್ಲಿ ಇನ್ನೂ ಅಡಗಿಸಿಟ್ಟಿರುವ ಬಾಂಬ್‌ಗಳನ್ನು ಸ್ಫೋಟವಾಗದಂತೆ ನಾವು ತಡೆಯುತ್ತೇವೆ. ಆರ್ಥಿಕವಾಗಿ ಅಭಿವೃದ್ಧಿ ಮಾಡುತ್ತೇವೆ. ಉದ್ಯೋಗಾವಕಾಶ ಸೃಷ್ಟಿಸುತ್ತೇವೆ. ಗಾಜಾವನ್ನು ಮರು ನಿರ್ಮಾಣ ಮಾಡುತ್ತೇವೆ ಎಂದು ಹಲವು ಆಫರ್‌ಗಳನ್ನ ಘೋಷಣೆ ಮಾಡಿದರು. ಆದ್ರೆ ಗಾಜಾದಲ್ಲಿರುವ 18 ರಿಂದ 20 ಲಕ್ಷ ಪ್ಯಾಲೆಸ್ತೀನಿಯನ್ನರು ಗಾಜಾವನ್ನು ತೊರೆದು ನೆರೆಯ ದೇಶಗಳಲ್ಲಿ ಆಶ್ರಯ ಪಡೆಯಬೇಕು ಎಂದು ಹೇಳಿದ್ದಾರೆ.
ಗಾಜಾ ವಾಸಕ್ಕೆ ಯೋಗ್ಯವಲ್ಲ. ಅಭಿವೃದ್ಧಿಪಡಿಸಿದ ನಂತರ ಇದು ವಿಶ್ವದಾದ್ಯಂತ ಜನರಿಗೆ ನೆಲೆಯಾಗಲಿದೆ. ರಿವೇರಿಯಾ ಆಗಿ ಗಾಜಾ ಬದಲಾಗಲಿದೆ. ರಿವೇರಿಯಾ ಎಂಬುದು ಇಟಾಲಿಯನ್ ಪದವಾಗಿದ್ದು, ಇದರ ಅರ್ಥ ಕರಾವಳಿ. ಇಟಾಲಿಯನ್ ಮತ್ತು ಫ್ರೆಂಚ್ ರಿವೇರಿಯಾದಂತೆ ಗಾಜಾವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಮುಖ್ಯವಾಗಿ ಗಾಜಾವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವ ಉದ್ದೇಶವನ್ನು ಟ್ರಂಪ್ ಹೊಂದಿದ್ದಾರೆ. ಹಾಗಾಗಿ ಪ್ಯಾಲೆಸ್ತೀನಿಯರನ್ನು ಸ್ಥಳಾಂತರಿಸುವುದು ಅವಶ್ಯಕ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಈ ಆಫರ್‌ಗೆ ಇಸ್ರೇಲ್ ಪ್ರಧಾನಿ ಒಪ್ಪಿದರೂ. ಮಧ್ಯಪ್ರಾಚ್ಯ ಹಾಗೂ ಅನೇಕ ಯುರೋಪಿಯನ್ ದೇಶಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಟ್ರಂಪ್ ಇಡೀ ಗಾಜಾವನ್ನ ಸಂಪೂರ್ಣವಾಗಿ ಇಸ್ರೇಲ್ ನಿಯಂತ್ರಣಕ್ಕೆ ಕೊಡುವುದಕ್ಕಾಗಿ ಈ ಪ್ಲ್ಯಾನ್ ಮಾಡಿದ್ದಾರೆಂದು ಕೆಲ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಮುಂದೆ ಟ್ರಂಪ್ ಅವರ ನಿಲುವು ಏನೆಂಬುದನ್ನು ಕಾದುನೋಡಬೇಕಿದೆ.