Sunday, 20th January 2019

ತಾಳಿ ಕಟ್ಟಿದ ಗಂಡನನ್ನೇ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ್ಳಾ ಪತ್ನಿ?

ಚಿಕ್ಕಬಳ್ಳಾಪುರ: ಪತಿ ಹಾಗೂ ಪತ್ನಿ ನಡುವೆ ನಡೆದ ಜಗಳದಲ್ಲಿ ಪತಿಯೊರ್ವ ಬರ್ಬರವಾಗಿ ಕೊಲೆಗೀಡಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ನಗರದ ಎಂಜಿ ರಸ್ತೆಯ 8 ನೇ ವಾರ್ಡ್ ನಲ್ಲಿ ಈ ಘಟನೆ ನಡೆದಿದ್ದು, ಮನೆಯ ಪಕ್ಕದಲ್ಲಿ ಛಾಯಾಕುಮಾರ್ (30) ಎಂಬಾತನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯ ಬಟ್ಟೆ ಹರಿದಿದ್ದು, ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದೆ. ಅಲ್ಲದೇ ದೇಹವೆಲ್ಲಾ ರಕ್ತದಿಂದ ಕೂಡಿದೆ. ಹೀಗಾಗಿ ಗಲಾಟೆ ನಡೆದು ಕೊಲೆಯಾಗಿರೋದು ದೃಢವಾಗಿದೆ.

ಮೃತ ವ್ಯಕ್ತಿ ವೃತ್ತಿಯಲ್ಲಿ ಚಾಲಕನಾಗಿದ್ದು, ಪತ್ನಿ ಜಾನಕಿ ಹಾಗೂ ಇತರರು ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯ ಹೊರ ಭಾಗದಲ್ಲಿ ಮೃತದೇಹ ಪತ್ತೆಯಾದ್ರೂ, ಮನೆಯ ಅಕ್ಕಪಕ್ಕ ಸೇರಿದಂತೆ ಮನೆಯ ಒಳಭಾಗದಲ್ಲೂ ರಕ್ತದ ಕಲೆಗಳಿವೆ. ಹೀಗಾಗಿ ಪತ್ನಿ ಜಾನಕಿ ಹಾಗೂ ಛಾಯಾಕುಮಾರ್ ನಡುವೆ ಜಗಳ ನಡೆದು ಗಲಾಟೆಯಲ್ಲಿ ಕೊಲೆ ನಡೆದಿರಬಹುದು ಅಂತ ಮೇಲ್ನೋಟಕ್ಕೆ ತಿಳಿದುಬರ್ತಿದೆ.

ಜಾನಕಿ ಹಾಗೂ ಛಾಯಾಕುಮಾರ್ ನಡುವೆ ಪದೇ ಪದೇ ಜಗಳ ನಡೆಯುತ್ತಿದ್ದು, ಛಾಯಾಕುಮಾರ್ ಮನೆಗೆ ಬರ್ತಿರಲಿಲ್ಲವಂತೆ. ಹೀಗಾಗಿ ಜಾನಕಿ ಅಕ್ರಮ ಸಂಬಂಧ ಹೊಂದಿರಬಹುದು ಅಂತ ಅಂದಾಜಿಸಲಾಗಿದೆ. ಆದ್ರೆ ಆಕಸ್ಮಿಕವಾಗಿ ಕಳೆದ ರಾತ್ರಿ ಗಂಡ ಮನೆಗೆ ಬಂದಾಗ ಅನೈತಿಕ ಸಂಬಂಧವನ್ನ ಕಣ್ಣಾರೆ ಕಂಡಿರಬಹುದು ಅಥವಾ ಅನೈತಿಕ ಸಂಬಂಧದ ವಿಚಾರವಾಗಿ ಜಗಳ ನಡೆದು ಕೊಲೆಯಾಗಿರಬಹುದು ಅಂತ ಊಹಿಸಲಾಗಿದೆ.

ಈ ಸಂಬಂಧ ಪತ್ನಿ ಜಾನಕಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಕಾರ್ತಿಕ್ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ. ಪತ್ನಿ ಮೇಲೆಯೇ ಅನುಮಾನ ಬಲವಾಗಿದ್ದು, ಸತ್ಯ ಬಾಯ್ಬಿಡಿಸಲು ಪೊಲೀಸರು ಮುಂದಾಗಿದ್ದಾರೆ.

ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *