Connect with us

Latest

ದಾಳಿಯ ಬಗ್ಗೆ ಭಾರತ ಮೊದಲೇ ಎಚ್ಚರಿಕೆ ನೀಡಿತ್ತು: ಶ್ರೀಲಂಕಾ ಅಧ್ಯಕ್ಷ

Published

on

ಕೊಲಂಬೋ: ದಾಳಿಯ ಬಗ್ಗೆ ಭಾರತ ಎಚ್ಚರಿಕೆ ನೀಡಿದ್ದರೂ ದೇಶದ ಭದ್ರತಾ ಸಂಸ್ಥೆ ನನ್ನ ಗಮನಕ್ಕೆ ತಂದಿರಲಿಲ್ಲ ಎಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಗಂಭೀರ ಆರೋಪ ಮಾಡಿದ್ದಾರೆ.

ಈಸ್ಟರ್ ಭಾನುವಾರದ ವೇಳೆ ನಡೆದ ಸರಣಿ ಬಾಂಬ್ ಸ್ಫೋಟದ ಕುರಿತು ದೇಶವನ್ನು ಉದ್ದೇಶಿಸಿ ಮಂಗಳವಾರ ರಾತ್ರಿ ದೂರದರ್ಶದ ಮೂಲಕ ಮಾತನಾಡಿದ ಅಧ್ಯಕ್ಷರು, ಉಗ್ರರ ದಾಳಿ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ದಾಳಿಯ ಬಗ್ಗೆ ದೇಶದ ಭದ್ರತಾ ಸಂಸ್ಥೆಗೆ ಗುಪ್ತಚರ ಇಲಾಖೆ ಹಾಗೂ ಭಾರತದಿಂದ ಮೊದಲೇ ಮಾಹಿತಿ ಸಿಕ್ಕಿತ್ತು. ದರೆ ಇದನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರದೇ ನಿಷ್ಕಾಳಜಿ ತೋರಿದ್ದಾರೆ ಎಂದರು.

ಭದ್ರತಾ ಸಂಸ್ಥೆಯು ದಾಳಿಯ ಬಗ್ಗೆ ನನಗೆ ಮಾಹಿತಿ ನೀಡಿದ್ದರೆ ತಕ್ಷಣವೇ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲು ಸೂಚನೆ ನೀಡುತ್ತಿದ್ದೆ. ಆದರೆ ಅವರು ಹಾಗೇ ಮಾಡಲಿಲ್ಲ. ಹೀಗಾಗಿ ಮಾಹಿತಿ ರವಾನಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. 24 ಗಂಟೆಯ ಒಳಗಾಗಿ ದೇಶದ ಭದ್ರತಾ ಪಡೆಯನ್ನು ಪುನರಚಿಸಲಾಗುವುದು ಎಂದು ತಿಳಿಸಿದರು.

ಭಾರತ ಏನು ಹೇಳಿತ್ತು?
ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ದೇಶದ ಒಳಗಡೆ ಇರುವ ಕೆಲವು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಿತ್ತು. ಇವರ ವಿಚಾರಣೆ ವೇಳೆ ಒಬ್ಬಾತ ಶ್ರೀಲಂಕಾದ ಝಾರಂ ಹಸೀಂ ಬಗ್ಗೆ ಬಾಯಿ ಬಿಟ್ಟಿದ್ದ. ಈತ ಶ್ರೀಲಂಕಾದ ಮುಸ್ಲಿಂ ಸಂಘಟನೆಯ ಬಗ್ಗೆ ಸಂಪರ್ಕದಲ್ಲಿದ್ದಾನೆ ಎಂದು ತಿಳಿಸಿದ್ದ. ಈ ಮಾಹಿತಿಯನ್ನು ಭಾರತ ಶ್ರೀಲಂಕಾದ ಅಧಿಕಾರಿಗಳಿಗೆ ಹಂಚಿಕೊಂಡಿತ್ತು.

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಕನ್ನಡಿಗರು, ಭಾರತೀರು ಸೇರಿದಂತೆ 321 ಮಂದಿ ಸಾವನ್ನಪ್ಪಿದ್ದು, 500 ಜನರು ಗಾಯಗೊಂಡಿದ್ದಾರೆ. ಈ ದಾಳಿಯನ್ನು ನಾವೇ ನಡೆಸಿದ್ದೇವೆ ಎಂದು ಐಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ. ಘಟನೆ ನಡೆದ 2 ದಿನಗಳ ನಂತರ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದ್ದು, ಶ್ರೀಲಂಕಾ ಕ್ರಿಶ್ಚಿಯನ್ ಹಾಗೂ ವಿದೇಶಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ ಎಂದು ತಿಳಿಸಿದೆ. ತನ್ನ `ಅಮಾಕ್’ ನ್ಯೂಸ್ ಮೂಲಕ ಐಸಿಸ್ ಈ ವಿಚಾರವನ್ನು ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಒಟ್ಟಿನಲ್ಲಿ ಈಗ ಇರಾಕ್, ಸಿರಿಯಾ ಬಳಿಕ ಶ್ರೀಲಂಕಾದಲ್ಲೂ ಐಸಿಸ್ ತನ್ನ ಜಾಲವನ್ನು ಹಬ್ಬಿಸಿರುವುದು ದೃಢಪಟ್ಟಿದೆ.

ಘಟನೆ ಸಂಬಂಧ ಶ್ರೀಲಂಕಾ ಪೊಲೀಸ್ ತನಿಖೆ ನಡೆಸಿ ವಶಕ್ಕೆ ಪಡೆದಿರುವ 40ಕ್ಕೂ ಹೆಚ್ಚು ಮಂದಿಯನ್ನು ಪ್ರಶ್ನಿಸಲಾಗಿದೆ. ಅಲ್ಲದೇ ಸ್ಥಳೀಯರು ನೀಡಿದ ಮಾಹಿತಿ ಅನ್ವಯ ಸಿರಿಯಾ ಪ್ರಜೆಯನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಕೊಲಂಬೋದಲ್ಲಿ ನಡೆದ ದಾಳಿಯಲ್ಲಿ ಮೊದಲ 6 ದಾಳಿಗಳಲ್ಲಿ ಮೂರು ಚರ್ಚ್‍ನಲ್ಲಿ ಹಾಗೂ 3 ಹೋಟೆಲ್ ಗಳಲ್ಲಿ ನಡೆಸಲಾಗಿತ್ತು. ಕೇವಲ 20 ನಿಮಿಷಗಳ ಅವಧಿಯಲ್ಲಿ ಈ ದಾಳಿ ನಡೆಸಲಾಗಿತ್ತು. ಆ ಬಳಿಕ ಮತ್ತೆರಡು ಬಾಂಬ್ ಸ್ಫೋಟಗಳು ನಡೆದಿತ್ತು. ಘಟನೆಯಲ್ಲಿ 38 ವಿದೇಶಿಯರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಶ್ರೀಲಂಕಾ ಸರ್ಕಾರ ತಿಳಿಸಿದ್ದು, ಇದರಲ್ಲಿ ಭಾರತ ಸೇರಿದಂತೆ ಇಂಗ್ಲೆಂಡ್, ಯುಎಸ್, ಆಸ್ಟ್ರೇಲಿಯಾ, ಟರ್ಕಿ, ಚೀನಾ, ಡ್ಯಾನಿಷ್, ಡಚ್ ಮತ್ತು ಪೋರ್ಚುಗಿಸ್ ಪ್ರಜೆಗಳು ಸೇರಿದ್ದಾರೆ.

Click to comment

Leave a Reply

Your email address will not be published. Required fields are marked *