ಬೆಂಗಳೂರು: ವಿಶ್ವಾಸ ಮತ ಯಾಚಿಸಿ ಗೆಲ್ಲುವ ಧೈರ್ಯದಲ್ಲಿರುವ ಸಿಎಂಗೆ ಜಯ ಸಿಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದರೆ ಸಿಎಂ ಆತ್ಮವಿಶ್ವಾಸ ನಿಜವಾಗಬೇಕಾದರೆ ಮಾಜಿ ಸಿಎಂ ಅವರ ಬೆಂಬಲ ಬೇಕಾಗಿದೆ. ಆದರೆ ಒಳಗೊಳಗೆ ಅಸಮಾಧಾನ ಹೊಂದಿರುವ ಸಿಎಂ ಸರ್ಕಾರಕ್ಕೆ ಅವರ ಬೆಂಬಲ ಸಿಗುತ್ತಾ ಅನ್ನೋ ಅನುಮಾನ ಮೂಡಿದೆ.
ಹೌದು. ಸಿಎಂ ಅವರು ತಾವಾಗಿಯೇ ಬಹುಮತ ಸಾಬೀತು ಮಾಡುವ ಮಾತನ್ನ ಶುಕ್ರವಾರ ಸದನದಲ್ಲಿ ಆಡಿದ್ದಾರೆ. ನಿಯಮದ ಪ್ರಕಾರ 14 ದಿನದ ಒಳಗೆ ಸ್ಪೀಕರ್ ಸಿಎಂಗೆ ಬಹುಮತ ಸಾಬೀತು ಮಾಡಲು ಸೂಚಿಸಬೇಕು. ಸಿಎಂ ಬಹುಮತ ಸಾಬೀತು ಮಾಡಬೇಕಾದರೆ ಮಾಜಿ ಸಿಎಂ ಸಿದ್ದರಾಮಯ್ಯರ ಬೆಂಬಲ ಬೇಕೆ ಬೇಕು ಎಂಬ ಮಾಹಿತಿ ಲಭ್ಯವಾಗಿದೆ.
ಸಿದ್ದರಾಮಯ್ಯ ಬೆಂಬಲ ಇದ್ದರೆ ರಾಜೀನಾಮೆ ಕೊಟ್ಟ ಶಾಸಕರ ಪೈಕಿ ಕೆಲವರಾದರೂ ವಾಪಾಸ್ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಅದನ್ನ ಹೊರತುಪಡಿಸಿದರೆ ಇರುವ ಶಾಸಕರು ಕೈತಪ್ಪಿ ಹೋಗದಂತೆ ನೋಡಿಕೊಳ್ಳುವ ಸಾಮಥ್ರ್ಯ ಸಿದ್ದರಾಮಯ್ಯರಿಗಷ್ಟೇ ಇರುವುದು. ಆದ್ದರಿಂದ ಸಿಎಂ ವಿಶ್ವಾಸಮತ ಗೆಲುವು ಸಾಧ್ಯವಾಗಬೇಕಾದರೆ ಸಿದ್ದರಾಮಯ್ಯರ ವಿಶ್ವಾಸ ಗಳಿಸಿಕೊಳ್ಳಲೇ ಬೇಕಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಸಿಎಂ ಹಾಗೂ ಮಾಜಿ ಸಿಎಂ ನಡುವಿನ ಜಿದ್ದು ಕಡಿಮೆಯಾಗಿ ವಿಶ್ವಾಸಾರ್ಹತೆ ಮೂಡುತ್ತಾ ಅಥವಾ ಪರಸ್ಪರ ವಿಶ್ವಾಸದ ಕೊರತೆಯಿಂದ ಸದನದಲ್ಲಿ ವಿಶ್ವಾಸ ಕಳೆದು ಹೋಗುತ್ತಾ ಅನ್ನೋದೆ ಸದ್ಯದ ಕುತೂಹಲವಾಗಿದೆ.