ದೇಶದ ಮಹಾಪುರುಷರನ್ನ ಸ್ಮರಿಸೋದು ಅಪರಾಧವೇ – ಟೀಕೆಗಳಿಗೆ ಮೋದಿ ಟಾಂಗ್

Public TV
2 Min Read
modi 2

ಕೇವಾಡಿಯಾ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಚಿಂತನೆಗಳು ಈಗಲೂ ಪ್ರಸ್ತುತವಾಗಿದ್ದು, 500ಕ್ಕೂ ಪ್ರತ್ಯೇಕ ಸಂಸ್ಥಾನಗಳನ್ನು ಒಂದಾಗಿಸುವ ಪಟೇಲರ ಚಿಂತನೆ ಇಂದು ಭಾರತವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದಾಗಿಸಿದೆ ಎಂದು ಪ್ರಧಾನಿ ನರೇದ್ರ ಮೋದಿ ಹೇಳಿದ್ದಾರೆ.

ನರ್ಮದಾ ಜಿಲ್ಲೆಯಲ್ಲಿರುವ ಕೇವಾಡಿಯಾ ಬಳಿ `ಏಕತಾ ಪ್ರತಿಮೆ’ ಅನಾವರಣ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಅದ್ಭುತ ಶಿಲ್ಪಿಗಳು ಪಟೇಲರ ಅದ್ಭುತ ವಿಗ್ರಹವನ್ನು ಪೂರ್ಣಗೊಳಿಸಿದ್ದಾರೆ. ಈ ಮೂರ್ತಿ ಅದಿವಾಸಿಗಳ ಯೋಗದಾನವಾಗಿದ್ದು, ಇದು ನಿರ್ಮಾಣವಾಗಲು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರ ಕಾರ್ಯ ಇತಿಹಾಸದ ಪುಟ ಸೇರಲಿದೆ. ಇದು ಭಾರತದ ಇತಿಹಾಸಲ್ಲಿ ಅರ್ಥಪೂರ್ಣ ದಿನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಟೇಲರ ಪ್ರತಿಮೆ ಅನಾವರಣ ಮಾಡಿದ್ದು ನನ್ನ ಜೀವನದ ಮಹತ್ವದ ಕ್ಷಣವಾಗಿದ್ದು, ಇದು ನಿಮ್ಮ ಆರ್ಶೀವಾದದಿಂದ ಆಗಿದೆ. ಈ ಪತ್ರಿಮೆ ಶ್ರಮ ವಹಿಸಿದ ಪ್ರತಿಯೊಬ್ಬರಿಗೂ ಇದರ ಗೌರವವನ್ನು ಸಲ್ಲಿಸುತ್ತೇನೆ. ಪಟೇಲರ ದೂರದೃಷ್ಟಿ ಮತ್ತು ಕಠಿಣ ನಿಲುವುಗಳೇ ಭಾರತದ ಏಕೀಕರಣಕ್ಕೆ ಕಾರಣ. ಒಂದೊಮ್ಮೆ ಅವರ ಆ ನಿಲುವು ತೆಗೆದುಕೊಳ್ಳದಿದ್ದರೆ ಹೈದರಾಬಾದ್ ಚಾರ್ ಮಿನಾರ್ ಹಾಗೂ ಸೋಮನಾಥ ದೇವಾಲಯವನ್ನು ನೋಡಲು ವೀಸಾ ತೆಗೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಹೇಳಿದರು. ಇದನ್ನು ಓದಿ: ಏಕತಾ ಪ್ರತಿಮೆಯ ವಿಶೇಷತೆ ಏನು? ಎಷ್ಟು ಬಲಶಾಲಿಯಾಗಿದೆ? ಖರ್ಚು ಎಷ್ಟಾಗಿದೆ? – ಇಲ್ಲಿದೆ ಪೂರ್ಣ ವಿವರ

ಇದೇ ವೇಳೆ ದೇಶಕ್ಕೆ ಸೇವೆ ಸಲ್ಲಿಸಿದ ಮಹಾನ್ ನಾಯಕರನ್ನು ನೆನೆದರೆ ಕೆಲವರು ತಮ್ಮ ರಾಜಕೀಯ ದೃಷ್ಟಿಯಿಂದ ಇದನ್ನು ಕ್ರೈಂ ಎಂದು ಟೀಕೆ ಮಾಡಿದ್ದಾರೆ. ಇದನ್ನು ನೋಡಿದರೆ ನನಗೆ ಅಚ್ಚರಿಯಾಗುತ್ತಿದೆ. ಒಬ್ಬ ಮಹಾನ್ ದೇಶ ಪ್ರೇಮಿಯನ್ನು ನೆನೆಯುವುದು ಅಪರಾಧವಾಗುತ್ತದಯೇ ಎಂದು ಪ್ರಶ್ನೆ ಮಾಡಿ ಪಟೇಲರ ಸ್ಮಾರಕ ನಿರ್ಮಾಣ ಕುರಿತು ಕೇಳಿ ಬಂದ ಟೀಕೆಗಳಿಗೆ ತಿರುಗೇಟು ನೀಡಿದರು.

ನಾನು ಸಿಎಂ ಆಗಿದ್ದ ವೇಳೆ ಏಕತಾ ಪ್ರತಿಮೆ ನಿರ್ಮಾಣದ ಕನಸು ಕಂಡಿದ್ದೆ, ಇದಕ್ಕೆ ಲಕ್ಷಾಂತರ ರೈತರು ಕಬ್ಬಿಣವನ್ನು ನೀಡುವ ಮೂಲಕ ಬೆಂಬಲ ನೀಡಿದರು. ಇಂತಹ ದಿನಗಳನ್ನು ದೇಶದ ಚರಿತ್ರೆಯಿಂದ ತೆಗೆದು ಹಾಕುವುದು ಕಷ್ಟಸಾಧ್ಯವಾಗುತ್ತದೆ. ಭಾರತೀಯರಿಗೆ ಇದು ಪ್ರೇರಣೆಯ ಸಂಕೇತವಾಗಿ ನಿಲ್ಲಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಗುಜರಾತ್ ಸಿಎಂ ವಿಜಯ್ ರೂಪಾಣಿ, ಮಧ್ಯಪ್ರದೇಶ ರಾಜ್ಯಪಾಲರದ ಆನಂದಿಬೆನ್ ಪಟೇಲ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಸುಮಾರು 20ಕ್ಕೂ ಹೆಚ್ಚು ಡ್ರೋನ್ ಮೂಲಕ ಸೆರೆಹಿಡಿಯುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಪ್ರತಿಮೆಯ ಅನಾವರಣ ಬೆನ್ನಲ್ಲೇ ಐಎಎಫ್ ಪ್ಲೇನ್ ಗಳು ಪ್ರತಿಮೆ ಬಳಿ ತ್ರಿವರ್ಣ ಧ್ವಜವನ್ನು ಗಾಳಿಯಲ್ಲೇ ಸೃಷ್ಟಿಸಿದ್ದವು. ಇದಾದ ಬಳಿಕ 29 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ ಕಲಾವಿದರು ನೃತ್ಯ, ಸಂಗೀತ ಕಲಾ ಪ್ರದರ್ಶನ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *