ನವದೆಹಲಿ: ಕಾಂಗ್ರೆಸ್ ಪಕ್ಷದ ಪಟ್ಟವನ್ನು ಡಿಸೆಂಬರ್ ನಲ್ಲಿ ರಾಹುಲ್ ಗಾಂಧಿ ಅಲಂಕರಿಸಲು ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಪ್ರಿಯಾಂಕ ಗಾಂಧಿ ಅವರಿಗೂ ಪಕ್ಷದ ಪ್ರಮುಖ ಸ್ಥಾನವನ್ನು ನೀಡಲು ಎಐಸಿಸಿ ಮುಂದಾಗಿದೆ.
ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃಷ್ಟಿಯಿಂದ ರಾಜಸ್ಥಾನ ಅಥವಾ ಕರ್ನಾಟಕ ಚುನಾವಣಾ ಜವಾಬ್ದಾರಿಯನ್ನು ಪ್ರಿಯಾಂಕ ಗಾಂಧಿ ಅವರಿಗೆ ವಹಿಸಲು ಪಕ್ಷದ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎಕೆ ಆ್ಯಂಟನಿ ಹಾಗೂ ಅಹ್ಮದ್ ಪಟೇಲ್ ಅವರು ಈ ವಿಚಾರವನ್ನು ಪಕ್ಷದ ಇತರೇ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಸಹ ಪ್ರಿಯಾಂಕ ಗಾಂಧಿ ಅವರಿಗೆ ನಾಯಕತ್ವವನ್ನು ವಹಿಸಲು ಪಕ್ಷದಲ್ಲಿಯೇ ಹಲವು ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಪ್ರಿಯಾಂಕ ಈಗಾಗಲೇ ಹಲವು ಚುನಾವಣೆಯಗಳಲ್ಲಿ ವಿಶೇಷವಾಗಿ, 2013ರ ಲೋಕಸಭಾ ಚುನಾವಣೆ ವೇಳೆ ಉತ್ತರಪ್ರದೇಶದಲ್ಲಿ ಸೋನಿಯಾ ಕ್ಷೇತ್ರವಾದ ರಾಯ್ ಬರೇಲಿ ಮತ್ತು ರಾಹುಲ್ ಗಾಂಧಿ ಅವರ ಅಮೇಥಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಆದರೆ ಪ್ರಿಯಾಂಕ ಗಾಂಧಿಗೆ ಮಣೆ ಹಾಕಿದರೆ ರಾಹುಲ್ ಗಾಂಧಿ ವರ್ಚಸ್ಸು ಕಡಿಮೆಯಾಗಲಿದೆ ಎನ್ನುವ ಮಾತುಗಳೂ ಕೇಳಿ ಬಂದ ಕಾರಣದಿಂದ ಇದು ಸಫಲವಾಗಿರಲಿಲ್ಲ.
Advertisement
Advertisement
ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಜೊತೆಗೆ ಮಾತುಕತೆ ನಡೆಸಿದ್ದ ಕರ್ನಾಟಕ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಪ್ರಿಯಾಂಕಾಗಾಂಧಿ ಅವರನ್ನು ಪ್ರಚಾರಕ್ಕೆ ಬಳಸಿಕೊಂಡರೆ ಪಕ್ಷಕ್ಕೆ ಆಗುವ ಅನುಕೂಲಗಳನ್ನು ಮನದಟ್ಟು ಮಾಡಿಕೊಟ್ಟಿದ್ದರು ಎನ್ನಲಾಗಿದೆ.
ಕೇಂದ್ರದಲ್ಲಿ ಎನ್‍ಡಿಎ ಸರ್ಕಾರದ ಆಳ್ವಿಕೆ ಬಂದ ಬಳಿಕ ಮೋದಿ- ಅಮಿತ್ ಶಾ ತಂತ್ರಗಾರಿಕೆಯಿಂದಾಗಿ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಾಗುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಹೀಗಾಗಿ ಪಕ್ಷದ ಹಿತ ದೃಷ್ಟಿಯಿಂದ ಹೊಸ ನಾಯಕರ ಆಯ್ಕೆ ಕುರಿತ ಚಿಂತನೆಗಳು ಹೆಚ್ಚಾಗಿವೆ. ರಾಹುಲ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿದಂತೆ ಪಕ್ಷದ ಹಲವು ಸ್ಥಾನಗಳಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಗಳಿದ್ದು, ಹೊಸ ನಾಯಕರು ಪಕ್ಷದ ಅಧಿಕಾರವನ್ನು ವಹಿಸುವ ಸಾಧ್ಯತೆಗಳಿವೆ. ಪ್ರಸ್ತುತ ರಾಹುಲ್ ಗಾಂಧಿ ವಹಿಸಿರುವ ಉಪಾಧ್ಯಕ್ಷ ಹುದ್ದೆಗೆ ಮನಮೋಹನ್ ಸಿಂಗ್ ಅಥವಾ ಎಕೆ ಆ್ಯಂಟನಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
2004ರಲ್ಲಿ ಸಂಸದರಾದ ಬಳಿಕ ರಾಹುಲ್ ಗಾಂಧಿ 2007ರಲ್ಲಿ ಎಐಸಿಸಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಇದಾದ ಬಳಿಕ 2013ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಬಳಿಕ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಈ ಹಿಂದೆ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿಗೆ ನೀಡುವ ಕುರಿತು ಸಹ ಅಪಸ್ವರ ಕೇಳಿಬಂದಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆಗೆ ಈ ಜವಾಬ್ದಾರಿ ವಹಿಸಬೇಕು. ಇದರಿಂದ ಪಕ್ಷದ ಸಂಘಟನೆಗೂ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.