ವಿಜಯಪುರ: ಕಾಂಗ್ರೆಸ್ ಶಾಸಕಾಂಗ ಸಭೆ(ಸಿಎಲ್‍ಪಿ) ಸೂಚಿಸಿದರೆ ನಾನು ಸಿಎಂ ಆಕಾಂಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಮತ್ತೊಮ್ಮೆ ಮುಖ್ಯಮಂತ್ರಿ ಅಗುವ ಬಯಕೆಯನ್ನು ಪರೋಕ್ಷವಾಗಿ ವ್ಯಕ್ತವಪಡಿಸಿದ್ದಾರೆ.
ಜಿಲ್ಲೆಯ ತ್ರಿಕೋಟಾದಲ್ಲಿ ಮಾತನಾಡಿದ ಅವರು ಮುಂದಿನ ಬಾರಿ ಕೂಡಾ ಸಿಎಲ್‍ಪಿ ಕಮಿಟಿ ಸಿದ್ದರಾಮಯ್ಯ ಅವರನ್ನು ಸಿಎಂ ಅಭ್ಯರ್ಥಿ ಎಂದು ಸೂಚಿಸಿದರೆ ಅದಕ್ಕೆ ನನ್ನ ಸಹಮತವಿದೆ. ಆದರೆ ನಮ್ಮ ಪಕ್ಷದಲ್ಲಿ ಈ ಕುರಿತು ಯಾವುದೇ ಭಿನ್ನಭಿಪ್ರಾಯವಿಲ್ಲ, ಎಲ್ಲರೂ ಒಟ್ಟಿಗೆ ಸೇರಿ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಆಡಳಿತಕ್ಕೆ ತರಲು ಪ್ರಯತ್ನಿಸುತ್ತೆವೆ. ಚುನಾವಣೆಯಲ್ಲಿ ಬಹುಮತ ಪಡೆಯುವುದು ನಮ್ಮ ಮುಂದಿನ ಗುರಿಯಾಗಿದೆ ಎಂದರು.
ಸಿಎಂ ಹುದ್ದೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸದ ಪರಮೇಶ್ವರ್, ನಗುತ್ತಲೇ ನಿಮ್ಮ ಪ್ರಶ್ನೆಗೆ ನಾನು ಸರಿಯಾಗಿ ಉತ್ತರಿಸುವುದನ್ನು ಕಲಿತುಕೊಳ್ಳುತ್ತೇನೆ ಎಂದು ಪರೋಕ್ಷವಾಗಿ ಸಿಎಂ ಆಗುವ ಬಯಕೆಯನ್ನು ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಪಂಗಡದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅವರ ಸರ್ವಾಂಗೀಣ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರು ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ ಸರ್ಕಾರ ಎಸ್‍ಸಿ, ಎಸ್‍ಟಿ ಹಣವನ್ನು ದುರುಪಯೋಗ ಮಾಡುತ್ತಿದೆ ಎನ್ನುವ ಬಿಎಸ್‍ವೈ ಅವರ ಆರೋಪ ದುರಾದೃಷ್ಟಕರ ಎಂದರು.
ದಲಿತರ ಬಗ್ಗೆ ಯಡಿಯೂರಪ್ಪ ಅವರಿಗೆ ಏಕಾಏಕಿ ಪ್ರೀತಿ ಬಂದಿದೆ. ಎಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನ ಸರ್ಕಾರ ಸಾಲ ಮನ್ನ ಮಾಡಲು ಬಳಸಿಲ್ಲ. ಪರಿಶಿಷ್ಠರಿಗೆ ಮೀಸಲಿಟ್ಟ 24.50% ಹಣ ಬಳಕೆ ಕುರಿತು ಯಡಿಯೂರಪ್ಪ ಅವರಿಗೆ ತಪ್ಪು ಕಲ್ಪನೆ ಇದೆ. ಒಳ ಮೀಸಲಾತಿ ಕುರಿತು ಸಿಎಂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಈ ಕುರಿತು ಕೆಲವು ಸಲಹೆ ನೀಡಿದ್ದಾರೆ ಎಂದರು.
ಇದೇ ವೇಳೆ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ನೂರಾರು ಕೋಟಿ ರೂ. ಖರ್ಚು ಮಾಡುತ್ತಿದೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತಳ್ಳಿ ಹಾಕಿದರು. ಅಲ್ಲದೆ ನೂರಾರು ಕೋಟಿ ಖರ್ಚು ಮಾಡಿದರೆ ಬಿಜೆಪಿ ಅವರು ಲೆಕ್ಕ ನೀಡಲಿ ಎಂದು ಸವಾಲು ಎಸೆದರು.
ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣದಲ್ಲಿ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಲೋಕನಾಥ್ ಮತ್ತು ಹ್ಯಾರಿಸ್ ಅವರ ಕಡೆಯವರು ಪರಸ್ಪರ ಮಾತುಕತೆಯ ಮೂಲಕ ಈ ಪ್ರಕರಣ ಬಗೆಹರಿಸಿಕೊಳ್ಳುವ ಪ್ರಯತ್ನದ ಬಗ್ಗೆ ಮಾಧ್ಯಮಗಳಿಂದ ತಿಳಿದಿದ್ದೇನೆ. ಗೃಹಸಚಿವರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಹ್ಯಾರಿಸ್ ಸಭೆ ನಡೆಸಿದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.