– ಕೆಂಪು ಉಗ್ರರ ಅಂತ್ಯಕ್ಕೆ ಮೂರೇ ತಿಂಗಳು ಬಾಕಿ!
ನಕ್ಸಲ್ ಮುಖಂಡ ಮದ್ವಿ ಹಿದ್ಮಾ (Madvi Hidma) ಎನ್‌ಕೌಂಟರ್ ಸೇರಿದಂತೆ, ಸಾವಿರಾರು ನಕ್ಸಲರ ಸಾಮೂಹಿಕ ಶರಣಾಗತಿ ಮಾವೋವಾದಿಗಳ ಯುಗದ ಅಂತ್ಯವನ್ನು ಸೂಚಿಸುತ್ತಿದೆ ಎಂದು ತಜ್ಜರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಮಾರ್ಚ್ 2026ರ ವೇಳೆಗೆ ನಕ್ಸಲರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ 2024ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಘೋಷಣೆ ಮಾಡಿದ್ದರು. ಈ ಘೋಷಣೆಗೆ ಈಗ ಸಂಪೂರ್ಣ ಪುಷ್ಠಿ ಕೊಡುವಂತಹ ವಾತಾವರಣ ನಿರ್ಮಾಣವಾಗಿದೆ. ನಕ್ಸಲ್ ನಿಗ್ರಹಕ್ಕೆ ಭದ್ರತಾ ಪಡೆಗಳು ಹಾಗೂ ಪೊಲೀಸರು ಸಾಥ್ ನೀಡಿದ್ದಾರೆ. ಇನ್ನೂ ಕೆಲವೇ ಕೆಲವು ನಕ್ಸಲರು ಸಕ್ರಿಯರಾಗಿದ್ದು, ಅವರನ್ನು ಮುಖ್ಯ ವಾಹಿನಿಗೆ ತರಲು ಯತ್ನ ನಡೆಯುತ್ತಿದೆ. ಅದು ಸಾಧ್ಯವಾಗದಿದ್ದರೆ ಎನ್‌ಕೌಂಟರ್ ಒಂದೇ ದಾರಿಯಾಗಿದೆ. ನಕ್ಸಲಿಸಂಗೆ (Naxalism) ಬಿದ್ದ ದೊಡ್ಡ ಪೆಟ್ಟು, ಶರಣಾಗತಿ, ನಕ್ಸಲಿಸಂ ನಿರ್ಮೂಲನೆಯ ದೇಶದ ಹಾಗೂ ಕರ್ನಾಟಕದ ಸ್ಥಿತಿ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಅಮಿತ್ ಶಾ ಹೇಳಿದ್ದೇನು?
ಮಾವೋವಾದಿ ದಂಗೆಯನ್ನು ಮಾರ್ಚ್ 2026 ರ ವೇಳೆಗೆ ಅಳಿಸಿಹಾಕಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ 2024 ರಲ್ಲಿ ಘೋಷಿಸಿದ್ದರು. ಈ ಸಮಯದಲ್ಲಿ ಅವರ ಹೇಳಿಕೆ ಮೇಲೆ ದೇಶದಲ್ಲಿ ಅಷ್ಟು ವಿಶ್ವಾಸ ವ್ಯಕ್ತವಾಗಿರಲಿಲ್ಲ. ಇದರ ಬೆನ್ನಲ್ಲೇ ಅವರು ಅನೇಕ ನಕ್ಸಲರ ಗುಂಪುಗಳಿಗೆ ಶರಣಾಗುವಂತೆ ಸೂಚಿಸಿದ್ದರು. ಅಲ್ಲದೇ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಕರೆಯನ್ನೂ ಕೊಡಲಾಗಿತ್ತು. ಇದು ಫಲಿಸದೇ ಇದ್ದಾಗ ಎನ್‌ಕೌಂಟರ್ ಅನಿವಾರ್ಯವಾಗಿತ್ತು. ಇದನ್ನೂ ಓದಿ: Naxal Encounter| 3 ರಾಜ್ಯಕ್ಕೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕ ವಿಕ್ರಂ ಗೌಡ ಯಾರು?
500 ನಕ್ಸಲರು ಮಾತ್ರ ಸಕ್ರಿಯ!
ದೇಶದ 10 ರಾಜ್ಯಗಳಲ್ಲಿ 125ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹರಡಿರುವ ನಕ್ಸಲರ ಗುಂಪನ್ನು ‘ರೆಡ್ ಕಾರಿಡಾರ್’ ಎಂದು ಕರೆಯಲಾಗುತ್ತದೆ. ಸುಮಾರು 30,000 ಕ್ಕೂ ಹೆಚ್ಚು ನಕ್ಸಲರು ಈ ಭಾಗಗಳಲ್ಲಿ ಸಕ್ರಿಯರಿದ್ದರು. ಈಗ ಕೇವಲ 500ರ ಆಸುಪಾಸಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅವರೆಲ್ಲ ಸೀಮಿತ ಜಿಲ್ಲೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಶರಣಾಗದಿದ್ದರೆ ಶೀಘ್ರದಲ್ಲೇ ಅವರನ್ನು ಸಹ ಎನ್‌ಕೌಂಟರ್ ಮಾಡುವ ಸಾಧ್ಯತೆಗಳಿವೆ.
ಮದ್ವಿ ಹಿದ್ಮಾ ಎನ್‌ಕೌಂಟರ್
26 ಭೀಕರ ದಾಳಿಗಳ ಮಾಸ್ಟರ್ ಮೈಂಡ್ ಮದ್ವಿ ಹಿದ್ಮಾ ಭಾರತದ ಮೋಸ್ಟ್ ವಾಂಟೆಡ್ ನಕ್ಸಲರಲ್ಲಿ ಒಬ್ಬನಾಗಿದ್ದ. ಸಿಪಿಐ (ಮಾವೋವಾದಿ) ಸಂಘಟನೆಯ ಉನ್ನತ ಕಮಾಂಡರ್ ಆಗಿದ್ದ. ಈತನ ತಲೆಗೆ 25 ರಿಂದ 50 ಲಕ್ಷ ರೂ. ವರೆಗೆ ಬಹುಮಾನ ಘೋಷಿಸಲಾಗಿತ್ತು. ಇದನ್ನೂ ಓದಿ: 26 ಡೆಡ್ಲಿ ದಾಳಿಗಳ ಹಿಂದಿದ್ದ ನಕ್ಸಲ್ ಮುಖಂಡ ಮಾಡ್ವಿ ಹಿದ್ಮಾ ಆಂಧ್ರದಲ್ಲಿ ಹತ್ಯೆ – ಎನ್‌ಕೌಂಟರ್‌ನಲ್ಲಿ ಪತ್ನಿಯೂ ಬಲಿ
ಮದ್ವಿ ಹಿದ್ಮಾ ಕಳೆದ ಕೆಲ ವರ್ಷಗಳಲ್ಲಿ ಛತ್ತಿಸ್‌ಘಡದ ಬಸ್ತಾರ್, ಸುಕ್ಮಾ, ದಾಂತೇವಾಡ ಹಾಗೂ ಮಲ್ಕನ್‌ಗಿರಿ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಅರೆಸೇನಾಪಡೆಗಳ ಮೇಲೆ ನಡೆದ ಘೋರ ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ. 2010ರ ದಾಂತೇವಾಡದಲ್ಲಿ 76 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾಗಿದ್ದ ಆಗ ಇವನ ಬಗ್ಗೆ ಮಾಹಿತಿ ನೀಡಿದವರಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.
ಇತ್ತೀಚೆಗೆ ಭದ್ರತಾ ಪಡೆಗಳ ದಾಳಿಯಲ್ಲಿ ನಕ್ಸಲ್ ಮುಖಂಡ ಮದ್ವಿ ಸಾವಿಗೀಡಾಗಿದ್ದ. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆತನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಪ್ರದೇಶದಲ್ಲಿ ಆತನ ಸಹಚರರ ಆರು ಶವಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ನಕ್ಸಲಿಸಂ ಎಂದರೇನು?
ನಕ್ಸಲಿಸಂ 1967 ರಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯ ನಕ್ಸಲ್ಬರಿ ಗ್ರಾಮದಲ್ಲಿ ರೈತರ ದಂಗೆಯೊಂದಿಗೆ ಪ್ರಾರಂಭವಾಯಿತು. ಚೀನಾದ ಕಮ್ಯುನಿಸ್ಟ್ ನಾಯಕ ಮಾವೋ ಝೆಡಾಂಗ್ ಮತ್ತು ಮಾರ್ಕ್ಸ್ ವಾದಿ-ಲೆನಿನಿಸ್ಟ್ ಸಿದ್ಧಾಂತದಿಂದ ಪ್ರೇರಿತರಾದ ಗುಂಪು ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟ ಆರಂಭಿಸಿತ್ತು. ಪ್ರಸ್ತುತ ವ್ಯವಸ್ಥೆಯನ್ನು ಉರುಳಿಸಿ ಕಮ್ಯುನಿಸ್ಟ್ ರಾಜ್ಯವನ್ನು ಸ್ಥಾಪಿಸುವುದು ನಕ್ಸಲಿಸಂನ ಗುರಿಯಾಗಿತ್ತು.
ಮಾವೋವಾದಿಗಳಿಗೆ ದೊಡ್ಡ ಪೆಟ್ಟು!
ಮಾವೋವಾದಿ ಚಳುವಳಿಗೆ ದೊಡ್ಡ ಹೊಡೆತ ಬಿದ್ದದ್ದು 2025ರ ಅಕ್ಟೋಬರ್ 14 ರಂದು. ಆ ದಿನ ನಕ್ಸಲ್ ನಾಯಕ ಮತ್ತು ಕೇಂದ್ರ ಸಮಿತಿ ಸದಸ್ಯ ಮಲ್ಲೊಜುಲ ವೇಣುಗೋಪಾಲ್ ರಾವ್ ಅಲಿಯಾಸ್ ಭೂಪತಿ ಸೇರಿದಂತೆ 61 ಮಾವೋವಾದಿಗಳು ಮಹಾರಾಷ್ಟ್ರದಲ್ಲಿ ಶರಣಾಗಿದ್ದರು.
ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಮಿಲಿಷಿಯಾ) ಎಂದು ಕರೆಯಲ್ಪಡುವ ಇತರ ಹೋರಾಟಗಾರರನ್ನು ಶರಣಾಗುವಂತೆ ಮಾಡಿದ್ದರು. ಅವರೊಂದಿಗೆ ಎರಡು ರಾಜ್ಯ ವಲಯ ಸಮಿತಿ ಸದಸ್ಯರು, 10 ವಿಭಾಗೀಯ ಸಮಿತಿ ಸದಸ್ಯರು ಮತ್ತು ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದ ಇತರ ಕಾರ್ಯಕರ್ತರು ಶರಣಾಗಿದ್ದರು. ಈ ವೇಳೆ 7 AK-47ಗಳು, ಆರು SLRಗಳು ಮತ್ತು ಆರು INSAS ರೈಫಲ್‌ಗಳು ಸೇರಿದಂತೆ 54 ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿದ್ದರು.
2025 ರಲ್ಲಿ ಮಾವೋವಾದಿಗಳ ಶರಣಾಗತಿ
ಈ ವರ್ಷ ಅಕ್ಟೋಬರ್ 17 ರಂದು ಛತ್ತೀಸ್‌ಗಢದಲ್ಲಿ ಹೆಚ್ಚಿನ ಸಂಖ್ಯೆಯ ಮಾವೋವಾದಿಗಳು ಶರಣಾದರು. ಡಿಜಿಪಿ 210 ನಕ್ಸಲರನ್ನು ಗುಲಾಬಿ ಹೂ ಮತ್ತು ಭಾರತೀಯ ಸಂವಿಧಾನದ ಪ್ರತಿ ಕೊಟ್ಟು ಅವರನ್ನು ಸ್ವಾಗತಿಸಿದ್ದರು. ಶರಣಾದವರಲ್ಲಿ ಒಬ್ಬ ಕೇಂದ್ರ ಸಮಿತಿ ಸದಸ್ಯರು (CCM), ಇಬ್ಬರು DKSZC ಸದಸ್ಯರು ಮತ್ತು 15 DVCM ಕಾರ್ಯಕರ್ತರು ಸೇರಿದ್ದರು.
ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ AK-47 ಗಳು, INSAS ರೈಫಲ್‌ಗಳು, SLR ಗಳು ಮತ್ತು ಕಾರ್ಬೈನ್‌ಗಳನ್ನು ಈ ವೇಳೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಇದು ದಕ್ಷಿಣ ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ಪ್ರಭಾವ ಕುಸಿತವನ್ನು ಸೂಚಿಸುತ್ತದೆ.
ಮಾಧ್ಯಮ ವರದಿಗಳ ಪ್ರಕಾರ 2100 ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ. ಸಿಪಿಐನ (ಮಾವೋವಾದಿ) ಎಂಟು ಉನ್ನತ ನಾಯಕರು ಸೇರಿದಂತೆ 313 ಮಾವೋವಾದಿಗಳು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ ಮತ್ತು 836 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದಲ್ಲದೆ ಇನ್ನಿತರೆ ಸಂಘಟನೆಗಳ 1,639 ನಕ್ಸಲರು ಶರಣಾಗಿದ್ದಾರೆ.
ಅಮಿತ್ ಶಾ ಪುನರುಚ್ಛಾರ
ನಮ್ಮ ನೀತಿ ಸ್ಪಷ್ಟವಾಗಿದೆ, ಶರಣಾಗಲು ಬಯಸುವವರಿಗೆ ಸ್ವಾಗತ, ಮತ್ತು ಬಂದೂಕನ್ನು ಹಿಡಿದಿವರು ನಮ್ಮ ಭದ್ರತಾ ಪಡೆಗಳ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ನಕ್ಸಲಿಸಂನ ಹಾದಿಯಲ್ಲಿರುವವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಬೇಕೆಂದು ನಾನು ಮತ್ತೊಮ್ಮೆ ಮನವಿ ಮಾಡುತ್ತೇನೆ. ಮಾರ್ಚ್ 31, 2026 ರ ಮೊದಲು ನಕ್ಸಲಿಸಂ ಬೇರುಸಹಿತ ಕಿತ್ತುಹಾಕಲು ನಾವು ಬದ್ಧರಾಗಿದ್ದೇವೆ ಎಂದು ಅಮಿತ್ ಶಾ ಪುನರ್ ಉಚ್ಛರಿಸಿದ್ದರು.
ವಿಕ್ರಂ ಗೌಡ ಎನ್‌ಕೌಂಟರ್ – ನಕ್ಸಲ್ ಮುಕ್ತ ಕರ್ನಾಟಕ
ಕರ್ನಾಟಕದಲ್ಲಿ 2003ರಿಂದ 2024 ರವರೆಗೆ ನಡೆದ ಒಟ್ಟು ನಾಲ್ಕು ಎನ್‌ಕೌಂಟರ್‌ಗಳಲ್ಲಿ ವಿಕ್ರಂ ಗೌಡ (Vikram Gowda) ಸಹಿತ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯಿಂದ ಸುಮಾರು 15 ಕಿ.ಮೀ. ದೂರದ ದುರ್ಗಮ ಕಾಡಿನ ಮಧ್ಯೆ ಇರುವ ಪೀತ್‌ಬೈಲು ಎಂಬಲ್ಲಿ 2024ರ ನ.18 ರಂದು ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ವಿಕ್ರಂ ಗೌಡನನ್ನು ಹತ್ಯೆ ಮಾಡಿತ್ತು.
20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ವಿಕ್ರಂ ಗೌಡ ಕಳೆದ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಕಾರ್ಮಿಕ ಸಂಘಟನೆಯಿಂದ ಬಂದಿದ್ದ ವಿಕ್ರಂ ಗೌಡ ಮೂರು ಬಾರಿ ಕರ್ನಾಟಕ ಪೊಲೀಸರ ಕೈಯಿಂದ ಪರಾರಿಯಾಗಿದ್ದ. 2016ರಲ್ಲಿ ಕೇರಳ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿದ್ದ. ಇವನ ಹತ್ಯೆ ಬಳಿಕ ನಕ್ಸಲ್ ಮುಕ್ತ ಕರ್ನಾಟಕ ಎಂದು ಘೋಷಿಸಲಾಗಿತ್ತು. ಇದನ್ನೂ ಓದಿ: ವಿಕ್ರಂ ಗೌಡನದ್ದು ಫೇಕ್ ಎನ್‌ಕೌಂಟರ್ – ಸಿಎಂ, ಗೃಹ ಸಚಿವರ ವಿರುದ್ಧ ಮಾಜಿ ನಕ್ಸಲ್ ಕಿಡಿ







