ಬೆಂಗಳೂರು: ಕಾಂಗ್ರೆಸ್ ನಾಯಕರ ಮೇಲೆ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಯೂಟರ್ನ್ ತೆಗೆದುಕೊಳ್ಳಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಸೋಮವಾರ ಎಐಸಿಸಿ ನಾಯಕಿ ಸೋನಿಯಾ ಗಾಂಧಿಯವರನ್ನು ರಾಮಲಿಂಗಾರೆಡ್ಡಿ ಪುತ್ರಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಭೇಟಿ ಮಾಡಿದ ಬಳಿಕ ಈ ಬಗ್ಗೆ ಸುದ್ದಿ ಹರಿದಾಡ್ತಿದೆ. ಇಂದಿನ ಸಿಎಲ್‍ಪಿ(ಕಾಂಗ್ರೆಸ್ ಶಾಸಕಾಂಗ ಸಭೆ)ಗೂ ರಾಮಲಿಂಗಾರೆಡ್ಡಿ ಆಗಮಿಸಬಹುದು ಎನ್ನಲಾಗಿದೆ.
ಸೋನಿಯಾ ಗಾಂಧಿ ಸಲಹೆ ಮೇರೆಗೆ ಶಾಸಕಿ ಸೌಮ್ಯಾ ರೆಡ್ಡಿ ಕೂಡ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್‍ನಲ್ಲೇ ರಾಜಕಾರಣ ಮಾಡುತ್ತಾ ಬಂದಿರುವ ರಾಮಲಿಂಗಾರೆಡ್ಡಿಗೆ ಪಕ್ಷ ಬಿಡುವ, ಬಿಜೆಪಿ ಸೇರುವ ಮನಸ್ಸಿಲ್ವಾ ಎಂಬ ಪ್ರಶ್ನೆ ಎದ್ದಿದೆ.
ನೇರವಾಗಿ ಸೋನಿಯಾರನ್ನ ಭೇಟಿಯಾಗಿಸಿ ಮಗಳ ಮೂಲಕ ಏಳು ಬಾರಿ ಆಯ್ಕೆಯಾಗಿರುವ ಶಾಸಕ ರಾಮಲಿಂಗಾ ರೆಡ್ಡಿ ಶಕ್ತಿಪ್ರದರ್ಶನ ಮಾಡಿದ್ರಾ ಎಂಬ ಅನುಮಾನವೂ ಮೂಡಿದೆ.
ಸೋಮವಾರ ಸೌಮ್ಯಾ ರೆಡ್ಡಿ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಅವರ ನಿವಾಸಲ್ಲಿ ಭೇಟಿ ಮಾಡಿ 14 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಈ ವೇಳೆ ನಿರ್ಧಾರ ಬದಲಿಸಲು ತಂದೆಗೆ ಹೇಳು. ಕಷ್ಟ ಕಾಲದಲ್ಲಿ ನಮ್ಮ ಜತೆ ಇರಿ ಎಂದು ಸೋನಿಯಾ ಗಾಂಧಿ ಸೌಮ್ಯಾ ರೆಡ್ಡಿ ಅವರಿಗೆ ಸಲಹೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.