ಮನ್ ಕೀ ಬಾತ್ ಒಂದು ಕಾರ್ಯಕ್ರಮವೇ: ಮೋದಿ ವಿರುದ್ಧ ಸಿಎಂ ವಾಗ್ದಾಳಿ

Public TV
1 Min Read
modi siddaramaiah

ಬೆಂಗಳೂರು: ಮನ್ ಕೀ ಬಾತ್ ಅದು ಒಂದು ಕಾರ್ಯಕ್ರಮವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಇರುವ ಗಾಂಧಿ ಪ್ರತಿಮೆ ಹಾಗೂ ಶಾಸ್ತ್ರಿ ಪುತ್ಥಳಿಗೆ ಗೌರವ ಸಲ್ಲಿಸಿದರು. ಈ ವೇಳೆ ಕನ್ನಡಿಗರು ‘ಕಾಮ್ ಕೀ ಬಾತ್’ ಎಂದು ಹಿಂದಿ ಹೆಸರು ಇಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೋದಿಯವರ ಮನ್ ಕೀ ಬಾತ್‍ಗೆ ಪ್ರತಿಯಾಗಿ ಪ್ರಾಸ ಬರುವಂತೆ ಕಾಮ್ ಕೀ ಬಾತ್ ಎಂದು ಹೇಳಿದ್ದೇನೆ ಅಷ್ಟೇ ಎಂದರು.

ಮಾತನ್ನು ಮುಂದುವರಿಸಿ, ಮನ್ ಕೀ ಬಾತ್ ಅದು ಒಂದು ಕಾರ್ಯಕ್ರಮವೇ? ಪ್ರಧಾನಿ ಅವರು ಏನು ಮಾಡದೇ ಮನ್ ಕೀ ಬಾತ್ ಮಾಡುತ್ತಿದ್ದಾರೆ. ನಾವು ಕೆಲಸ ಮಾಡಿ ಕಾಮ್ ಕೀ ಬಾತ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮತ್ತೆ ಕನ್ನಡ ಪಾಠ: ಕಾಮ್ ಕೀ ಬಾತ್ ಹೆಸರು ಇಡುವ ಬಗ್ಗೆ ಸಮರ್ಥಿಸಿದ ಅವರು, ಅನ್ಯ ಭಾಷೆಯ ಶಬ್ಧಗಳಿಗೆ ‘ಉ’ ಕಾರ ಸೇರಿಸಿದರೆ ಅದು ಕನ್ನಡ ಶಬ್ದ ಆಗುತ್ತದೆ ಎಂದು ಕುವೆಂಪು ಹೇಳಿದ್ದಾರೆ. ಬಸ್ – ಬಸ್ಸು, ಕಾರ್ – ಕಾರು ಎಂದು ಹೇಳುವುದಿಲ್ಲವೇ? ಹಾಗೆ ಕಾಮ್ ಕಿ ಬಾತ್ ಎನ್ನುವುದು ಕನ್ನಡ ಪದವೇ ಎಂದು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.

ಗಾಂಧಿ ನಾಯಕತ್ವದಲ್ಲಿ ಅನೇಕ ಜನ ಸ್ವಾತಂತ್ರ್ಯ ಹೋರಾಟಗಾರರು ಚಳುವಳಿಯಲ್ಲಿ ಭಾಗವಹಿಸಿದ್ದಾರೆ. ಗಾಂಧೀಜಿ ನಮಗೆ ಮಾತ್ರ ಅಲ್ಲ ಅವರು ವಿಶ್ವನಾಯಕರು. ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದರೆ ಅದು ಗಾಂಧೀಜಿ ಕೊಡುಗೆ. ಅಂತಹ ಮಹಾನ್ ನಾಯಕರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಒಬ್ಬ ಮತಾಂಧನ ಗುಂಡಿಗೆ ಅವರು ಬಲಿಯಾದರು. ಗಾಂಧೀಜಿ ಅವರನ್ನು ಮರೆತರೆ ದೇಶವೇ ಇಲ್ಲ ಎಂದು ಹೇಳಿ ಸ್ಮರಿಸಿದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರೂ ಕೂಡಾ ದೇಶ ಕಂಡಂತಹ ಪ್ರಾಮಾಣಿಕ ಪ್ರಧಾನಿ. ಬಹಳ ಮೌಲ್ಯಯುತವಾಗಿ ಬದುಕಿದ್ದ ಶಾಸ್ತ್ರೀಜಿ ಅವರ ಜೈಜವಾನ್ ಜೈಕಿಸಾನ್ ಘೋಷಣೆ ಜನಪ್ರಿಯ. ರೈತರಿಗೆ, ಸೈನಿಕರಿಗೆ ಬಹಳ ಗೌರವ ಕೊಡುತ್ತಿದ್ದರು ಎಂದು ಕೊಂಡಾಡಿದರು.

Share This Article