ಮಂಡ್ಯ: ಸಚಿವ ಸಿ.ಎಸ್ ಪುಟ್ಟರಾಜು ಬಳಿ ಕಾಂಗ್ರೆಸ್ ಹಿರಿಯ ಮುಖಂಡ ಜಿ. ಮಾದೇ ಗೌಡರು ಹಣ ಕೇಳಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಈ ಮೂಲಕ ಮಂಡ್ಯ ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಯುತ್ತಿದೆಯಾ ಅನ್ನೋ ಪ್ರಶ್ನೆಯೊಂದು ಚರ್ಚೆಗೆ ಗ್ರಾಸವಾಗಿದೆ.
ಮಾದೇಗೌಡರಿಗೆ ಬೇರೆ ಯಾರೋ ಫೋನ್ ಮಾಡಿಕೊಡುತ್ತಾರೆ. ಅಲ್ಲದೆ ಒಬ್ಬ ಸಚಿವರಾಗಿದ್ದವರು ಬೇರೆಯವರ ಫೋನಿನಲ್ಲಿ ಹಣದ ವಿಚಾರ ಮಾತನಾಡುತ್ತಾರಾ ಎಂಬ ಪ್ರಶ್ನೆಗಳು ಉದ್ಭವವಾಗಿದೆ. ಆದ್ರೆ ಈ ಆಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಆಡಿಯೋದಲ್ಲೇನಿದೆ?
ಮಾದೇಗೌಡರು ಸಚಿವರಿಗೆ ಕರೆ ಮಾಡುತ್ತಾರೆ. ಮಾದೇಗೌಡರ ಪರವಾಗಿ ಬೇರೊಬ್ಬ ವ್ಯಕ್ತಿ ಪುಟ್ಟರಾಜುಗೆ ಫೋನ್ ಮಾಡಿ ನಿಮ್ಮ ಜೊತೆ ಮಾದೇಗೌಡರು ಮಾತನಾಡಬೇಕಂತೆ ಎಂದು ಹೇಳುತ್ತಾರೆ. ಹೀಗಾಗಿ ಪುಟ್ಟರಾಜು ಅವರು ಆಯ್ತು, ಅವರಿಗೆ ಫೋನ್ ಕೊಡಿ ಅಂತಾರೆ. ಆಗ ಮಾದೇಗೌಡರು, ನನ್ನ ಮೊಬೈಲ್ ನಿಂದ ಹಲವು ಬಾರಿ ನಿಮಗೆ ಫೋನ್ ಮಾಡಿದೆ. ಆದ್ರೆ ನೀವು ಕರೆ ಸ್ವೀರಿಸಿಲ್ಲ ಎಂದಿದ್ದಾರೆ. ಆಗ ಸಚಿವರು, ಹೌದು ಮತ್ತೆ ವಾಪಸ್ ನಿಮಗೆ ಫೋನ್ ಮಾಡಿದೆ ಆಗ ನೀವು ಸಿಗಲಿಲ್ಲ ಎಂದು ಹೇಳುತ್ತಾರೆ. ನಂತರ ಹಣದ ವಿಚಾರ ಬರುತ್ತದೆ. ಮಾದೇ ಗೌಡರು ನೇರವಾಗಿ ಸಚಿವರ ಬಳಿ ಹಣ ಕೇಳುತ್ತಾರೆ.
ಎಲೆಕ್ಷನ್ ಖರ್ಚಿಗೆ ಹಣ ಬೇಕು. ನನ್ನ ಮಗ ಓಡಾಡುತ್ತಿದ್ದಾನೆ. ಹೀಗಾಗಿ ಹಣ ಕಳುಹಿಸಿ ಕೊಡಿ ಎಂದು ಕೇಳುತ್ತಾರೆ. ಇದಕ್ಕೆ ಪುಟ್ಟರಾಜು ಅವರು ಓಕೆ ಎಂದು ಹೇಳಿದ್ದಾರೆ ಅನ್ನೋ ಆಡಿಯೋ ಇದೀಗ ವೈರಲ್ ಆಗಿದೆ. ಆದರೆ ಈ ಆಡಿಯೋ ಎಷ್ಟರಮಟ್ಟಿಗೆ ಸತ್ಯ ಅನ್ನೋದು ತಿಳಿದುಬರಬೇಕಿದೆ. ಯಾಕಂದ್ರೆ ಒಬ್ಬರು ಹಿರಿಯ ರಾಜಕರಾಣಿಯಾಗಿದ್ದವರು ಬೇರೊಬ್ಬರ ಮೊಬೈಲ್ ನಿಂದ ಹಣದ ವಿಷಯ ಮಾತಾಡುತ್ತಾರಾ ಅಥವಾ ಇದೊಂದು ಕ್ರಿಯೇಟ್ ಮಾಡಿರುವ ಆಡಿಯೋನಾ ಎಂಬ ಪ್ರಶ್ನೆ ಎದ್ದಿದೆ.