– ಬಿಜೆಪಿ ಒಡೆದು ಆಳುವ ರಾಜನೀತಿ ಅನುಸರಿಸುತ್ತಿದೆ
ಹೈದರಾಬಾದ್: ದೇಶದಲ್ಲಿ ಬಿಜೆಪಿಯೂ ಒಡೆದು ಆಳುವ ರಾಜನೀತಿ ಅನುಸರಿಸುತ್ತಿದೆ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.
ಹೈದರಾಬಾದ್‍ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಹಿಂದೂ-ಮುಸ್ಲಿಮರ ಮಧ್ಯೆ ವೈಮನಸ್ಸು ಬೆಳೆಸುತ್ತಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಅವರು ನನ್ನ ಜೊತೆಗೆ ಚರ್ಚೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದು ಯಾರು? ಅವನು ಏನಾಗಿದ್ದ? ನಾಥೂರಾಮ್ ಗೋಡ್ಸೆ ನನ್ನ ಸಹೋದರನೇ? ಗೋಡ್ಸೆ ಉಗ್ರನಲ್ಲವೇ? ಮೋದಿ ಅವರೇ ಹೇಳಿ ಗೋಡ್ಸೆ ಯಾರು ಎಂದು ಪ್ರಶ್ನಿಸಿದ ಓವೈಸಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ-ಮುಸ್ಲಿಮರ ಬಗ್ಗೆ ಮಾತನಾಡುತ್ತಲೇ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರ ಭಾಷಣದ ವೇಳೆ, ಹಿಂದೂಗಳು ಶಾಂತಿ ಪ್ರಿಯರು. ಆದರೆ ಕಾಂಗ್ರೆಸ್ ಹಿಂದೂ ಉಗ್ರಗಾಮಿಗಳು ಎಂದು ಕರೆಯುವುದರ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಎಂದು ಕರೆ ಕೊಟ್ಟಿದ್ದಾರೆ.