ಇತ್ತೀಚೆಗಷ್ಟೇ ʻಇಂಡಿಯಾಸ್ ಗಾಟ್ ಲ್ಯಾಟೆಂಟ್ʼ (India’s Got Latent) ಎಂಬ ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ಯುಟ್ಯೂಬರ್ ಅಲಹಬಾದಿಯಾ ಅವರು ಅಶ್ಲೀಲ ಹೇಳಿಕೆ ನೀಡಿದ್ದರ ಸಂಬಂಧ ಸುಪ್ರೀಂ ಕೋರ್ಟ್ (Supreme Court) ವಿಚಾರಣೆ ನಡೆಸಿತು. ಈ ವೇಳೆ ರಣವೀರ್ ಅಲಹಬಾದಿಯ (Ranveer Allahbadia) ಅವರು ನಡೆಸುವ ಕಾರ್ಯಕ್ರಮದಲ್ಲಿ ಆಡಿದ ಕೆಲವು ಮಾತುಗಳು ಅವರ ಕೊಳಕು ಮನಸ್ಸನ್ನು ತೋರಿಸಿದೆ. ಈ ವ್ಯಕ್ತಿಯ ಮನಸ್ಸಿನಲ್ಲಿ ಏನು ಕೊಳಕಿದೆಯೋ ಅದನ್ನು ಈ ಕಾರ್ಯಕ್ರಮದ ಮೂಲಕ ಹರಡಲಾಗುತ್ತಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದರು.
ಈ ಬೆನ್ನಲ್ಲೇ ಮನೋತಜ್ಞರು ಒಂದಿಷ್ಟು ವಿಶ್ಲೇಷಣೆ ನಡೆಸಿದ್ದರು. ಮೂರು ಪೌಂಡ್‌ಗಳಷ್ಟು ತೂಕವಿರುವ ಮೆದುಳಿನಲ್ಲಿ ಅದೆಷ್ಟು ಕಸ (ಕೊಳಕು) ತುಂಬಿರುತ್ತದೆ? ಈ ಮೆದುಳಿನಲ್ಲಿ ಕಸ ಬರೋದಾದ್ರೂ ಹೇಗೆ? ಮೆದುಳಿನ ಕಸ (Brain Garbage) ಅಂದ್ರೆ ಏನು? ಕಸ ತುಂಬಿಕೊಂಡಷ್ಟು ಮನುಷ್ಯನಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ? ಈ ಮೆದುಳಿನ ಕಸ ತೆಗೆದುಹಾಕೋದು ಹೇಗೆ? ಎಂಬುದನ್ನು ವಿಶ್ಲೇಷಣೆ ಮಾಡಿದ್ದಾರೆ ಅದೇನೆಂಬುದನ್ನು ನೋಡೋಣ…
Advertisement
Advertisement
ಮೆದುಳಿನಲ್ಲಿ ತ್ಯಾಜ್ಯ ಏಕೆ ಸಂಗ್ರಹವಾಗುತ್ತೆ?
ನಮ್ಮ ಮನಸ್ಸು ಮೆಟ್ರೋ ರೈಲಿಗಿಂತಲೂ ಸ್ಪೀಡು, ನಿತ್ಯ ಒಂದಿಲ್ಲೊಂದು ವಿಷಯಗಳ ಹಿಂದೆ ಓಡುತ್ತಲೇ ಇರುತ್ತದೆ. ಹೀಗಾಗಿ ಜೀವ ರಾಸಾಯನಿಕ ಕ್ರಿಯೆ ನಡೆಯುತ್ತಲೇ ಇರುತ್ತದೆ, ಹೀಗಾದಾಗ ಮೆದುಳಿನ ಮೇಲೆ ಒಂದೊಂದೇ ಪದರಗಳು ಸೇರುತ್ತಾ ಹೋಗುತ್ತದೆ. ಜೊತೆಗೆ ಹಾರ್ಮೂನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ. ಇದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಮೆದುಳಿನಲ್ಲಿ ಒತ್ತಡ ರೂಪದಲ್ಲಿ ಕಸ ಸಂಗ್ರಹವಾಗುತ್ತದೆ. ಅಲ್ಲದೇ ವಾಯುಮಾಲಿನ್ಯ, ನಮಗೇ ಗೊತ್ತಿಲ್ಲದೇ ದೇಹ ಸೇರುವ ಮೈಕ್ರೋ ಪ್ಲಾಸ್ಟಿಕ್, ಮೆದುಳಿಗೆ ತುಂಬಾ ಅಪಾಯಕಾರಿ. ಇವು ದೇಹವನ್ನು ಪ್ರವೇಶಿಸಿ ಮೆದುಳಿಗೆ ಹಾನಿಯುಂಟು ಮಾಡುತ್ತದೆ.
Advertisement
Advertisement
ಸಾಮಾನ್ಯವಾಗಿ ಜನ ಇದನ್ನು ಸಹವಾಸ ದೋಷ ಎನ್ನುತ್ತಾರೆ. ಉದಾಹರಣೆಗೆ ಈ ಹಿಂದೆಲ್ಲ ಮನುಷ್ಯನಲ್ಲಿ ಹಾಸ್ಯಪ್ರಜ್ಞೆ ಇರುತ್ತಿತ್ತು. ನೈಸರ್ಗಿಕವಾಗಿ ನಕ್ಕಷ್ಟು ಮೆದುಳು, ಮನಸ್ಸು ಹಗುರವಾಗುತ್ತಿತ್ತು. ಕೆಲ ವಿಜ್ಞಾನಿಗಳು ಇದನ್ನು ನಿಜ ಎಂದು ಒಪ್ಪಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಮುಖದಲ್ಲಿ ಹ್ಯಾಸ್ಯ ರಸವೇ ಇಲ್ಲದೇ ಸದಾ ಜಡವಸ್ತುಗಳಂತೆ ವರ್ತಿಸುತ್ತಾರೆ, ಇನ್ನೂ ಕೆಲವರು ಡಬಲ್ ಮೀನಿಂಗ್ ಹಾಸ್ಯಗಳಲ್ಲೇ ಮುಳುಗುತ್ತಾರೆ. ಇಂತಹ ಹಾಸ್ಯಗಳಿಂದ ಕೆಲವರ ಮೆದುಳಿನಲ್ಲಿ ಕೆಟ್ಟ ಆಲೋಚನೆಗಳು ಬೆಳೆಯುತ್ತಾ ಹೋಗುತ್ತದೆ, ಬಳಿಕ ಮನಸ್ಥಿತಿ ಇದ್ದಂತೆ ಮಾತನಾಡುತ್ತಾರೆ. ರಣವೀರ್ ಅಲಹಾಬಾದಿಯಾ ಅವರ ವಿಚಾರದಲ್ಲಿ ಆಗಿರುವುದೂ ಸಹ ಇದೆ ಎನ್ನುತ್ತಾರೆ ವಿಶ್ಲೇಷಕರು.
ಮೆದುಳಿನಲ್ಲಿ ಕೊಳಕು ಸಂಗ್ರಹವಾಗುವುದರಿಂದ ಏನಾಗುತ್ತದೆ?
ಮೂರು ಪೌಂಡ್‌ಗಳಷ್ಟು ತೂಕವಿರುವ ಮೆದುಳಿನಲ್ಲಿ ಕಸ ಸ್ವಚ್ಛಗೊಳಿಸದಿದ್ದರೆ, ಅದು ಮೆದುಳನ್ನು ಹಾನಿ ಮಾಡುತ್ತಾ ಹೋಗುತ್ತದೆ. ಮೆದುಳಿನಲ್ಲಿ ಊತ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, ಇದರಿಂದ ತಲೆ ಭಾರವಾಗುತ್ತದೆ. ನಂತರ ನೆನಪಿನ ಶಕ್ತಿ, ಆಲೋಚನಾ ಶಕ್ತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಎಲ್ಲವೂ ಕಡಿಮೆಯಾಗುತ್ತದೆ. ಈ ಬೆಳವಣಿಗೆ ಮತ್ತೂ ಮುಂದುವರಿದರೆ ಆಲ್ಝಮೈರ್ ಮತ್ತು ಬುದ್ಧಿಮಾಂದ್ಯತೆಯಂತಹ ನರವೈಜ್ಞಾನಿಕ ಕಾಯಿಲೆಗಳೂ ಸಂಭವಿಸಬಹುದು. ಉದ್ವೇಗ, ಆತಂಕ ಮತ್ತು ಖಿನ್ನತೆಯ ಸಮಸ್ಯೆಯನ್ನು ತಂದೊಡ್ಡಬಹುದು ಎನ್ನುತ್ತಾರೆ ತಜ್ಞರು.
ಮೆದುಳು ಶುಚಿಯಾಗಬೇಕಾದ್ರೆ ನಾವೇನು ಮಾಡಬೇಕು?
ಈ ಎಲೆಕ್ಟ್ರಾನಿಕ್ ಯುಗದಲ್ಲಿ ನಮ್ಮ ಮೆದುಳನ್ನು ಸ್ವಚ್ಛಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರಬೇಕು. ಅದಕ್ಕೆ ಒಂದು ಮಾರ್ಗವಿದೆ, ಅದನ್ನ ಗ್ಲಿಂಫಾಟಿಕ್ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಕುತೂಹಲಕಾರಿ ವಿಷಯವೆಂದರೆ ಈ ಪ್ರಕ್ರಿಯೆಯು ನಿದ್ರೆಯ ಸಮಯದಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ. ನಿಯಮಿತವಾಗಿ ಮನುಷ್ಯನ ದೇಹಕ್ಕೆ ಅಗತ್ಯವಿರುವಷ್ಟು ಸಮಯ ನಿದ್ರೆ ಮಾಡುವುದರಿಂದ ಮೆದುಳಿನಲ್ಲಿನ ಕಸ ಸ್ವಚ್ಛವಾಗುತ್ತದೆ.
ನಾವು ಗಾಢ ನಿದ್ರೆಯಲ್ಲಿದಷ್ಟು ಮೆದುಳಿನ ಶುದ್ಧೀಕರಣ ಕ್ರಿಯೆ ಸಾಧಾರಣಕ್ಕಿಂತ 10 ಪಟ್ಟು ವೇಗವಾಗಿ ನಡೆಯುತ್ತದೆ. 2013ರಲ್ಲಿ ಅಮೆರಿಕದ ರೋಚೆಸ್ಟರ್ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. ಏಕೆಂದರೆ ನಾವು ನಿದ್ರಿಸುವಾಗ ನಮ್ಮ ಮೆದುಳಿನ ಕೋಶಗಳು ಶೇ.60 ರಷ್ಟು ಕುಗ್ಗುತ್ತವೆ. ಇದರಿಂದಾಗಿ ಗ್ಲಿಂಫಾಟಿಕ್ ವ್ಯವಸ್ಥೆಯು ಮೆದುಳಿನಲ್ಲಿ ಸಂಗ್ರಹವಾಗುವ ಕಸವನ್ನು ಹೊರಹಾಕಲು ಅವಕಾಶ ಮಾಡಿಕೊಡುತ್ತದೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.