ಮಂಗಳೂರು: ಪಶ್ಚಿಮ ಘಟ್ಟಗಳಲ್ಲಿ ಅಲ್ಲಲ್ಲಿ ಭೂಕುಸಿತ ಆಗುತ್ತಿರುವುದಕ್ಕೆ ಎತ್ತಿನಹೊಳೆ ಯೋಜನೆ ಹೆಸರಲ್ಲಿ ಅಣೆಕಟ್ಟುಗಳನ್ನು ಕಟ್ಟಿದ್ದೇ ಕಾರಣ ಎನ್ನುವುದು ಪರಿಸರ ತಜ್ಞರ ಮಾತು. ಹೀಗಾಗಿ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಲು ಸಕಲೇಶಪುರ ವ್ಯಾಪ್ತಿಯ ಎಂಟು ಕಡೆ ನಿರ್ಮಿಸಲಾಗುತ್ತಿರುವ ಅಣೆಕಟ್ಟು ಪ್ರದೇಶಕ್ಕೆ ತೆರಳಿ ನೋಡಿದಾಗ, ಅಲ್ಲಿ ಭೂಕುಸಿತ ಆಗಿರುವುದು ಕಂಡುಬಂದಿದೆ.
ಅಣೆಕಟ್ಟು ನಿರ್ಮಾಣಕ್ಕಾಗಿ ಗುಡ್ಡ ಅಗೆದಿರುವ ಪ್ರದೇಶದಲ್ಲಿ ಕುಸಿತ ಆಗಿದ್ದಲ್ಲದೆ, ಆಸುಪಾಸಿನ ಬೆಟ್ಟಗಳ ಮಧ್ಯೆಯೂ ಭೂಮಿ ಕುಸಿಯುತ್ತಿರುವುದು ಬೆಳಕಿಗೆ ಬಂದಿದೆ. ನೇತ್ರಾವತಿ ಉಗಮಗೊಳ್ಳುವ ಪ್ರದೇಶಗಳಲ್ಲಿಯೇ ಈ ಅಣೆಕಟ್ಟುಗಳಿದ್ದು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸುತ್ತಿರುವುದು, ಗುಡ್ಡ ಅಗೆದಿರುವುದು ದುರಂತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯ ಜನ ಹೇಳಿದ್ದಾರೆ.
ಬಯಲು ಸೀಮೆಗೆ ನೀರು ಹರಿಸಲು ಹಾಕಿರುವ ಪೈಪ್ ಲೈನ್ ಕೂಡ ಕುಸಿದು ಬಿದ್ದಿದೆ. ಕನಿಷ್ಠ ಪಿಲ್ಲರ್ ಕೂಡ ಇಲ್ಲದೆ ಹಾಕಿರುವ ಪೈಪ್ ಲೈನ್ ಬೇಜವಾಬ್ದಾರಿಯ ಕಾಮಗಾರಿ ಅನ್ನುವುದಕ್ಕೆ ಸಾಕ್ಷ್ಯ ಹೇಳುತ್ತಿದೆ. ಸಕಲೇಶಪುರದ ಮಾರನಹಳ್ಳಿಯಲ್ಲಿ ಬೃಹತ್ ಪಂಪ್ ಹೌಸ್ ಕಾಮಗಾರಿ ನಡೆಯುತ್ತಿದೆ. ಅಲ್ಲಿಯೂ ಗುಡ್ಡ ಕುಸಿಯುತ್ತಿದ್ದು, ಆತಂಕದಲ್ಲಿಯೇ ಕೆಲಸಗಾರರು ಕೆಲಸದಲ್ಲಿ ನಿರತರಾಗಿದ್ದಾರೆ.
ಅವೈಜ್ಞಾನಿಕ ಯೋಜನೆಯಿಂದ ಸಕಲೇಶಪುರದಲ್ಲಿಯೂ ಕೊಡಗಿನ ಮಾದರಿಯಲ್ಲೇ ಭೂಕುಸಿತ ಆಗುವ ಭಯ ಸ್ಥಳೀಯರಲ್ಲಿದೆ. ಹೀಗಾಗಿ ಎತ್ತಿನಹೊಳೆ ಯೋಜನೆಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಸಕಲೇಶಪುರ ವಿಭಾಗಾಧಿಕಾರಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv