ಬೆಂಗಳೂರು: ಕಷ್ಟ ಬಂದಾಗೆಲ್ಲಾ ಪಕ್ಷದ ಕೈ ಹಿಡಿದು ಮುನ್ನಡೆಸಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಇದೀಗ ಪಕ್ಷವೇ ಕೈ ಕೊಟ್ಟಿತಾ ಅನ್ನೋ ಅನುಮಾನವೊಂದು ಎದ್ದಿದೆ.
ರಾಜ್ಯ ಕಾಂಗ್ರೆಸ್ ಪಾಲಿಗಷ್ಟೇ ಅಲ್ಲದೆ ರಾಷ್ಟ್ರೀಯ ಕಾಂಗ್ರೆಸ್ ಪಾಲಿಗೆ ಕೂಡ ಸಾಕಷ್ಟು ಬಾರಿ ಆಪಬ್ಭಾಂಧವರಾಗಿದ್ದ ಡಿ.ಕೆ ಶಿವಕುಮಾರ್, ಈಗ ಜಾರಿ ನಿರ್ದೇಶನಾಲಯ(ಇಡಿ) ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಡಿಕೆಶಿಗೆ ಪಕ್ಷದ ಯಾವೊಬ್ಬ ನಾಯಕರೂ ನೆರವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
2017 ಆಗಸ್ಟ್ ನಲ್ಲಿ ಐಟಿ ದಾಳಿಯಾದಾಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂಸತ್ ನಲ್ಲೇ ಡಿಕೆಶಿ ಪರವಾಗಿ ಧ್ವನಿ ಎತ್ತಿ ಬೆಂಬಲಿಸಿದ್ದರು. ಆದರೆ ಆಗ ರಾಜ್ಯ ನಾಯಕರು ಗಟ್ಟಿ ಧ್ವನಿಯಲ್ಲಿ ಮಾತನಾಡಿರಲಿಲ್ಲ. ಇದೇ ಸಿಟ್ಟನ್ನು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ವೇಳೆ ಸ್ವತಃ ಡಿ.ಕೆ ಶಿವಕುಮಾರ್ ಅವರೇ ವ್ಯಕ್ತಪಡಿಸಿದ್ದರು.
ಈ ಬಾರಿ ಹೈಕಮಾಂಡ್ ಮಟ್ಟದ ನಾಯಕರು ಕೂಡ ತುಟಿಕ್ ಪಿಟಿಕ್ ಅಂತಿಲ್ಲ. ದೊಡ್ಡ ಮಟ್ಟದ ಬೆಂಬಲ ನೀಡಬೇಕಿದ್ದ ರಾಜ್ಯ ಕೈ ನಾಯಕರು ನಾಪತ್ತೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಒಂದು ಪತ್ರಿಕಾಗೋಷ್ಠಿಗಷ್ಟೇ ಸೀಮಿತವಾಗಿದ್ದಾರೆ. ರಾಜ್ಯ ರಾಜಕಾರಣವಿರಲಿ, ರಾಷ್ಟ್ರ ರಾಜಕಾರಣವಿರಲಿ ಕಳೆದ 5-6 ವರ್ಷದಿಂದ ಕೈ ಪಾಳಯ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಡಿಕೆಶಿಯೇ ಟ್ರಬಲ್ ಶೂಟರ್ ಆಗಿ ನೆರವಿಗೆ ನಿಂತಿದ್ದರು. ಆದರೆ ಇದೀಗ ಸಂಕಷ್ಟದಲ್ಲಿರುವ ಟ್ರಬಲ್ ಶೂಟರ್ ಬಗ್ಗೆ ಯಾರೊಬ್ಬರೂ ಚಕಾರ ಎತ್ತದೇ ಇರುವುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.