ವಿಜಯಪುರ: ಮಾಜಿ ಸಿಎಂ ಯಡಿಯೂರಪ್ಪ ಬರ ಅಧ್ಯಯನ ಮಾಡಿದರೆ ಇವರಿಗೇಕೆ ಹೊಟ್ಟೆ ಉರಿ? ಈ ಸರ್ಕಾರದ ಮಂತ್ರಿಗಳೇನು ಹವಾಮಾನ ವರದಿಗಾರರಾ? ಅಥವಾ ಚಾನಲ್‍ನಲ್ಲಿ ಕುಳಿತು ಭವಿಷ್ಯ ಹೇಳುವ ಜ್ಯೋತಿಷಿಗಳಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಎಸ್‍ವೈ ನಾಟಕದ ಬರ ಪ್ರವಾಸ ಮಾಡುತ್ತಿದ್ದಾರೆ ಎಂಬ ಗೃಹ ಸಚಿವ ಎಂಬಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಅವರು ಬರ ಅಧ್ಯಯನ ಮಾಡಿದರೆ ಇವರಿಗೇಕೆ ಹೊಟ್ಟೆ ಉರಿ. ಮಳೆ ಆಗಲಿ, ಬಿಡಲಿ ಎರಡನ್ನೂ ಚಿಂತನೆ ಮಾಡಬೇಕಿರುವುದು ಸರ್ಕಾರದ ಕೆಲಸ. ಮಳೆ ಆಗುತ್ತದೆ ಎಂದು ಕನಸು ಬಿದ್ದಿದೆಯಾ? ಈ ಸರ್ಕಾರದ ಮಂತ್ರಿಗಳೇನು ಹವಾಮಾನ ವರದಿಗಾರರಾ? ಅಥವಾ ವಾಹಿನಿಯಲ್ಲಿ ಕುಳಿತು ಭವಿಷ್ಯ ಹೇಳುವ ಜ್ಯೋತಿಷಿಗಳಾ? ಈಗಾಗಲೇ 26 ಕಡೆ ಸೋತು ಸುಣ್ಣವಾಗಿದ್ದಾರೆ. ಸುಮ್ಮನೇ ಕೂರಲು ಆಗಲ್ವಾ ಇವರಿಗೆ ಎಂದು ದೋಸ್ತಿ ಸರ್ಕಾರದ ವಿರುದ್ಧ ಹರಿಹಾಯ್ದರು.
Advertisement
Advertisement
ಸರ್ಕಾರ ಬೀಳುತ್ತೋ ಇಲ್ಲವೋ ಎಂಬುದು ನಾನು ಹೇಳಲ್ಲ. ಯಾಕೆಂದರೆ ನಾನು ಹೇಳಿದ ಭವಿಷ್ಯ ಸುಳ್ಳಾಗುತ್ತಿವೆ, ಅದಕ್ಕೆ ನಾನು ಭವಿಷ್ಯ ಹೇಳೋದು ಬಿಟ್ಟಿದ್ದೇನೆ ಎಂದರು. ಬಳಿಕ ಬಿಜೆಪಿ ಆಪರೇಷನ್ ಕಮಲ ಮಾಡಿಲ್ಲ. ಅವರ ಶಾಸಕರೇ ನಮ್ಮ ಪಾರ್ಟಿಗೆ ಬರುತ್ತೇವೆ ಎಂದು ಚೌಕಾಶಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಮಾಡುವ ಅವಶ್ಯಕತೆ ನಮಗಿಲ್ಲ. ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ, ಅವರೇ ಹೊಡೆದಾಡಿ ಹೊರಬಂದರೆ ಆಮೇಲೆ ನಾವು ನೋಡೋಣ ಎಂದು ಹೇಳಿದರು.