ಹಾವೇರಿ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ಧನ ನೀಡಿ ಎಂದರೆ ಸರ್ಕಾರದ ಹತ್ತಿರ ನೋಟ್ ಪ್ರಿಂಟ್ ಮಾಡುವ ಮಷಿನ್ ಇಲ್ಲಾ ಎಂದು ಸಿಎಂ ಯಡಿಯೂರಪ್ಪ ಹೇಳುತ್ತಾರೆ. ಆದರೆ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆಗೆ ಅನುದಾನ ನೀಡಲು ಅವರು ನೋಟ್ ಪ್ರಿಂಟ್ ಮಾಡ್ಕೊಂಡು ಹೋಗಿದ್ದರಾ ಎಂದು ಕಾಂಗ್ರೆಸ್ ಮುಖಂಡ ಹೆಚ್.ಕೆ.ಪಾಟೀಲ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಂ ಯಡಿಯೂರಪ್ಪ ಏನು ಕೇಳಿದರೂ ನನ್ನ ಹತ್ತರ ನೋಟ್ ಪ್ರಿಂಟ್ ಮಾಡುವ ಮಷಿನ್ ಇಲ್ಲಾ ಎನ್ನುತ್ತಿದ್ದಾರೆ. ಆದರೆ ಅವರ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆಗೆ 50 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಅದನ್ನ ಕೊಡಲು ಅವರು ನೋಟ್ ಪ್ರಿಂಟ್ ಮಾಡಿಕೊಂಡು ಹೋಗಿದ್ದರಾ? ನೆರೆ ಸಂತ್ರಸ್ತರು ಕೇವಲ ತಮ್ಮ ಮನೆಗಳನ್ನು ಕಳೆದುಕೊಂಡಿಲ್ಲ. ಬದಲಿಗೆ ಅವರ ಬದುಕನ್ನೇ ಕಳೆದುಕೊಂಡಿದ್ದಾರೆ. ಅವರ ಬದುಕನ್ನು ಕಟ್ಟಿಕೊಡುವ ಕೆಲಸವಾಗಬೇಕು ಎಂದು ಕಿಡಿಕಾರಿದರು.
Advertisement
Advertisement
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರಾಜ್ಯದಲ್ಲಿ ಉಂಟಾದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ದೆಹಲಿಯಲ್ಲಿ, ಬೆಂಗಳೂರಿನಲ್ಲಿ ಕುಳಿತುಕೊಂಡವರಿಗಾಗಲಿ, ವೈಮಾನಿಕ ವೀಕ್ಷಣೆಯಿಂದಾಗಲಿ ನೆರೆ ಹಾವಳಿಯ ಪೂರ್ಣ ಚಿತ್ರಣ ಸಿಗುವುದಿಲ್ಲ. ಹೀಗಾಗಿ ನೆರೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಸರ್ಕಾರ ಪ್ರಾಧಿಕಾರ ರಚಿಸಬೇಕು ಎಂದು ಎಚ್.ಕೆ.ಪಾಟೀಲ್ ಸರ್ಕಾರಕ್ಕೆ ಸಲಹೆ ನೀಡಿದರು.