ಸಾಮಾನ್ಯವಾಗಿ ಬಿಗ್‌ಬಾಸ್ (Bigg Boss Kannada 12) ಸ್ಪರ್ಧೆಯಲ್ಲಿ ಕಡಿಮೆ ವೋಟ್ ಬಂದ ಸ್ಪರ್ಧಿಗಳನ್ನ ಮನೆಯಿಂದ ಎಲಿಮಿನೇಟ್ ಮಾಡಿ ಕಳಿಸಲಾಗುತ್ತೆ. ಸ್ಪರ್ಧಿಗಳು ತಾವೇ ಹೋಗುತ್ತೇವೆ ಎಂದರೂ ಮನೆಯಿಂದ ಕಳಿಸದೆ ಇರುವ ಪ್ರಸಂಗದ ಉದಾಹರಣೆಯೂ ಇದೆ. ಹೀಗೆ ಆಟದ ರೂಲ್ಸ್ ಇರುವಾಗ ಇದೀಗ ಬಿಗ್‌ಬಾಸ್ ಮನೆಯಿಂದ ಸ್ಪರ್ಧಿ ಚಂದ್ರಪ್ರಭ (Chandraprabha) ಮನನೊಂದು ಮನೆಯಿಂದ ಹೊರಟಿರುವ ಘಟನೆ ನಡೆದಿದೆ.
ವಾರದ ಕಥೆ ಕಿಚ್ಚನ ಜೊತೆ ಸಂಭಾಷಣೆಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಒಂದು ಚಟುವಟಿಕೆ ಕೊಡುತ್ತಾರೆ. ಅದು ಕ್ಯಾರೆಕ್ಟರ್ ನೇಮ್ ಬೋರ್ಡ್ ಆಗಿದ್ದು, ಯಾವ್ಯಾವ ಸ್ಪರ್ಧಿ ಹೇಗೆ ಅನ್ನೋದನ್ನ ಹೇಳಿ ಅವರಿಗೆ ಆ ಬೋರ್ಡ್ ಹಾಕಬೇಕು. ಈ ಚಟುವಟಿಕೆಯಲ್ಲಿ ಸ್ಪರ್ಧಿ ಚಂದ್ರಪ್ರಭಗೆ ಇನ್ನೋರ್ವ ಸ್ಪರ್ಧಿ ಧನುಶ್ ಊಸರವಳ್ಳಿ ಎಂಬ ಬೋರ್ಡ್‌ನ್ನು ಕತ್ತಿಗೆ ಹಾಕುತ್ತಾರೆ. ಧನುಶ್ ಕೊಟ್ಟ ಕಾರಣ ಹಾಗೂ ಊಸರವಳ್ಳಿ ಎಂದಿದ್ದಕ್ಕೆ ಚಂದ್ರಪ್ರಭ ಕಾರ್ಯಕ್ರಮ ನಡೆಯುತ್ತಿರುವಾಗಲೇ ಅಲ್ಲಿಂದ ಎದ್ದು ಹೊರಟುಹೋಗುತ್ತಾರೆ. ಕಣ್ಣೀರಿಡುತ್ತಾ, ಯಾರು ಎಷ್ಟೇ ಕೂಗಿ ಕರೆದರೂ ಲೆಕ್ಕಿಸದೇ ಮುಖ್ಯದ್ವಾರದಿಂದ ಹೊರಟೇ ಹೋಗುತ್ತಾರೆ. ಈ ಘಟನೆ ಇದೀಗ ರಿಲೀಸ್ ಆದ ಪ್ರೋಮೋದಲ್ಲಿ ತೋರಿಸಲಾಗಿದೆ. ಅಸಲಿಗೆ ಚಂದ್ರಪ್ರಭ ನಿಜಕ್ಕೂ ಮನೆಯಿಂದ ಹೊರಟು ಹೋದರಾ..? ಸ್ವಯಂ ನಿರ್ಧಾರದಿಂದ ಯಾವ ಸ್ಪರ್ಧಿ ಯಾವಾಗ ಬೇಕಾದ್ರೂ ಸ್ಪರ್ಧೆಯಿಂದ ಹೋಗಬಹುದಾ..? ಇದೆಲ್ಲ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಕಲಾವಿದರಿಗೆ ಅವಮಾನ ಮಾಡಿದ್ಯಾರು – ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಕೆಂಡಾಮಂಡಲ
ಬಿಗ್‌ಬಾಸ್ ಸ್ಪರ್ಧೆ ಒಂದು ವ್ಯಕ್ತಿತ್ವದ ಆಟ ಕೂಡ ಆಗಿರೋದ್ರಿಂದ ಇಲ್ಲಿ ಟೀಕೆ, ಟಿಪ್ಪಣ, ವಿವರಣೆ, ದೂಷಣೆ ಎಲ್ಲವೂ ಸಾಮಾನ್ಯ. ಹೀಗಿದ್ಮೇಲೂ ಚಂದ್ರಪ್ರಭ ವೈಯಕ್ತಿಕವಾಗಿ ತೆಗೆದುಕೊಂಡಿದ್ಯಾಕೆ..? ಅಷ್ಟಕ್ಕೂ ಚಂದ್ರಪ್ರಭ ಹೊರನಡೆದಿದ್ದು ನಿಜವೇನಾ..? ಅದೆಲ್ಲ ಕಥೆಗಳು ಕಾರ್ಯಕ್ರಮದ ಪ್ರಸಾರದ ಬಳಿಕ ತಿಳಿಯಬೇಕಿದೆ.


