ಬೆಂಗಳೂರು: ಚುನಾವಣೆಗೆ ಇನ್ನೊಂದು ವರ್ಷ ಬಾಕಿ. ಈ ಮಧ್ಯೆಯೇ ಈಗ ಪಕ್ಷಾಂತರ ಮಾಡ್ತಾರೆ ಅನ್ನೋ ಚರ್ಚೆ ಬಹಿರಂಗವಾಗಿ ಆಗ್ತಿದೆ. ನಿನ್ನೆ ‘ಆಪರೇಷನ್ ಕಮಲ’ ರೂವಾರಿ ರಮೇಶ್ ಜಾರಕಿಹೊಳಿ ಭೇಟಿಯ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಡಿರುವ ಈಗ ಪಕ್ಷಾಂತರದ ಚರ್ಚೆಗೆ ಇಂಬು ನೀಡಿದೆ.
ಯತ್ನಾಳ್ ಈ ಹೇಳಿಕೆ ಕೊಟ್ಟ ಮರು ದಿನವೇ ಇವತ್ತು ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ‘ಬಿಜೆಪಿ ಮತ್ತು ಜೆಡಿಎಸ್‍ನವರು ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ಹೇಳಿದ್ದಾರೆ. ಇತ್ತ ತುಮಕೂರಲ್ಲಿ ಮಾತಾಡಿದ ಮಾಜಿ ಡಿಸಿಎಂ ಪರಮೇಶ್ವರ್ ‘ಕಾಂಗ್ರೆಸ್‍ಗೆ ಬರುವವರ ಪಟ್ಟಿ ಅಧ್ಯಕ್ಷರ ಕೈಯಲ್ಲಿದೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಪಿನ್ ರಾವತ್‌ಗೆ ಪದ್ಮವಿಭೂಷಣ – ರಾಜ್ಯದ ಐವರಿಗೆ ಪದ್ಮಶ್ರೀ
‘ಬಿಜೆಪಿ, ಜೆಡಿಎಸ್‍ನವರು ಸಂಪರ್ಕದಲ್ಲಿದ್ದಾರೆ’ ಎಂದು ಸಿದ್ದರಾಮಯ್ಯ ಆಡಿರುವ ಮಾತನ್ನ ಹೌದು ಎನ್ನುವ ಅರ್ಥದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತಾಡಿದ್ದಾರೆ. ಇನ್ನು ಆಪರೇಷನ್ ಕಮಲ ರೂವಾರಿ ರಮೇಶ್ ಜಾರಕಿಹೊಳಿ `19 ಮಂದಿ ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಅವರಲ್ಲಿ ಜೆಡಿಎಸ್‍ನ ಮೂವರನ್ನು ನಾವು ಮುಟ್ಟಲ್ಲ, ಕುಮಾರಸ್ವಾಮಿ ಜೊತೆಗೆ ನಾವು ಚೆನ್ನಾಗಿದ್ದೇವೆ’ ಎಂದು ಜಾರಕಿಹೊಳಿ ಹೇಳಿದ್ದಾರೆ.
ನಾವು ಬಿಜೆಪಿ ಬಿಟ್ಟು ಹೋಗಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ್ ಹೇಳಿದ್ದಾರೆ. ಒಂದು ವೇಳೆ ಬಿಜೆಪಿ ಬಿಟ್ರೆ ನಾನು ರಾಜಕೀಯನೇ ಬಿಡ್ತೀನಿ, ಯಾವ ಪಕ್ಷಕ್ಕೂ ಹೋಗಲ್ಲ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ. ಕೆಲವು ಸಚಿವರು ಬಿಜೆಪಿ ಬಿಟ್ಟು ಹೋಗ್ತಾರೆ ಎಂಬ ಯತ್ನಾಳ್ ಮಾತಿಗೆ ಪ್ರತಿಕ್ರಿಯಿಸಲು ಸುಧಾಕರ್ ನಿರಾಕರಿಸಿದ್ದಾರೆ.
ಒಂದ್ಕಡೆ ತಮ್ಮದೇ ಪಕ್ಷದ ಶಾಸಕ ಯತ್ನಾಳ್ ಅವರೇ ವಲಸಿಗ ಸಚಿವರು ಪಕ್ಷಾಂತರ ಮಾಡ್ತಾರೆ ಎಂಬ ಹೇಳಿಕೆ ನೀಡಿದ್ರೆ ಅತ್ತ ರಾಜ್ಯದಲ್ಲಿ ಪಕ್ಷ ಬಲವರ್ಧನೆ ಮಾಡ್ತೀವಿ ಅಂತ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇನ್ನು 16 ಮಂದಿ ಕಾಂಗ್ರೆಸ್‍ನವರು ಬಿಜೆಪಿಗೆ ಹೋಗ್ತಾರೆ ಅನ್ನೋ ಜಾರಕಿಹೊಳಿ ಮಾತಿಗೆ ಸಿದ್ದರಾಮಯ್ಯ ಅಣಕವಾಡಿದ್ದಾರೆ. `ರಾತ್ರಿ ಕಂಡ ಬಾವಿಗೆ ಯಾರಾದ್ರೂ ಬೀಳ್ತಾರಾ’ ಎಂದು ಲೇವಡಿ ಮಾಡಿದ್ದಾರೆ.
ಒಟ್ಟಿನಲ್ಲಿ ಯತ್ನಾಳ್ ನಿನ್ನೆ ಆಡಿದ ಮಾತು ಈಗ ರಾಜ್ಯ ರಾಜಕೀಯದಲ್ಲಿ ಚುನಾವಣೆಗೂ ಮೊದಲೇ ಪಕ್ಷಾಂತರ ಪರ್ವದ ಚರ್ಚೆಗೆ ನಾಂದಿ ಹಾಡಿದ್ದು ನಿಜ.